ಕಡೂರು ಮೂಲದ ಯೋಧ ರಾಜಸ್ಥಾನದಲ್ಲಿ ಮೃತ್ಯು

ಚಿಕ್ಕಮಗಳೂರು: ರಾಜಸ್ಥಾನದ ಬಿಕಾನೇರ್ ನಲ್ಲಿ ಬಿಎಸ್‍ಎಫ್ ಪಡೆಯ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ ಕಡೂರು ತಾಲೂಕಿನ ಗಿರೀಶ್ (37) ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ.
ಕಡೂರು ತಾಲೂಕು ಜೋಡಿ ತಿಮ್ಮಾಪುರ ಗ್ರಾಮದವರಾದ ಗಿರೀಶ್ ಅವರು ಗಡಿ ಭದ್ರತಾ ಪಡೆಯಲ್ಲಿ ಕಳೆದ 18 ವರ್ಷಗಳಿಂದ ಯೋಧರಾಗಿ ಕೆಲಸ ಮಾಡುತ್ತಿದ್ದು, ಸದ್ಯ ಅವರು ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಡಿ.8ರಂದು ಗಿರೀಶ್ ಅವರಿಗೆ ವಾಂತಿಯಾದ ಕಾರಣಕ್ಕೆ ವಿಶ್ರಾಂತಿಗೆ ಕಳುಹಿಸಲಾಗಿತ್ತು. ಈ ವೇಳೆ ಅವರು ಕುಟುಂಬಸ್ಥರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದು, ಆರೋಗ್ಯವಾಗಿದ್ದೇನೆಂದು ತಿಳಿಸಿದ್ದರು ಎಂದು ತಿಳಿದು ಬಂದಿದೆ.
ಆದರೆ ಮಂಗಳವಾರ ಬೆಳಗ್ಗೆ ಬಿಎಸ್‍ಎಫ್ ಅಧಿಕಾರಿಗಳು ಗಿರೀಶ್ ಅವರ ಕುಟುಂಬಸ್ಥರಿಗೆ ಕರೆ ಮಾಡಿ, ಗಿರೀಶ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಮೃತದೇಹವನ್ನು ಬೆಂಗಳೂರಿಗೆ ಕಳುಹಿಸಲಾಗುವುದು, ಅಲ್ಲಿಂದ ಜೋಡಿ ತಿಮ್ಮಾಪುರಕ್ಕೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಬುಧವಾರ ಸಂಜೆ ಜೋಡಿ ತಿಮ್ಮಾಪುರದಲ್ಲಿ ಗಿರೀಶ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಗಿರೀಶ್ ಕುಟುಂಬಸ್ಥರು ತಿಳಿಸಿದ್ದಾರೆ.







