ಕಳಸ | ಪಿಕಪ್ ಸಮೇತ ನದಿಗೆ ಬಿದ್ದು ಪುತ್ರ ನಾಪತ್ತೆ: ಶೋಕತಪ್ತ ತಾಯಿ ಆತ್ಮಹತ್ಯೆ
ಶಮಂತ್ ಗಾಗಿ ಮುಂದುವರಿದ ಶೋಧ ಕಾರ್ಯ

ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಪಿಕಪ್ ವಾಹನ ಸಮೇತ ನದಿಗೆ ಬಿದ್ದು ಮಗ ನೀರುಪಾಲಾಗಿರುವುದರಿಂದ ಬೇಸತ್ತು ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗಣಪತಿಕಟ್ಟೆ ನಿವಾಸಿ ರವಿಕಲಾ(58 )ಎಂದು ಗುರುತಿಸಲಾಗಿದೆ. ಅವರ ಪುತ್ರ ಶಮಂತ್ (23) ಗುರುವಾರ ಮಧ್ಯಾಹ್ನ ಕಳಕೋಡು ಗ್ರಾಮದಲ್ಲಿ ಪಿಕಪ್ ವಾಹನ ಸಹಿತ ಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ಸಂಜೆಯ ವೇಳೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ್ದ ರವಿಕಲಾ ಮಗನನ್ನು ನೆನೆದು ಕಣ್ಣೀರಿಟ್ಟಿದ್ದರು. ಬಳಿಕ ಗಣಪತಿಕಟ್ಟೆಯಲ್ಲಿರುವ ಮನೆಗೆ ಹಿಂದಿರುಗಿದ್ದ ಅವರು ರಾತ್ರಿ 10 ಗಂಟೆ ಸುಮಾರಿಗೆ ಮನೆ ಸಮೀಪದ ಕೆರೆಗೆ ಹಾರಿದ್ದಾರೆ. ಇದನ್ನು ಗಮನಿಸಿದ ಕೆಲವು ಯುವಕರು ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ರವಿಕಲಾ ಸಾಲ ಮಾಡಿ ಆರು ತಿಂಗಳ ಹಿಂದೆಯಷ್ಟೇ ಶಮಂತ್ ಗೆ ಪಿಕಪ್ ವಾಹನ ಕೊಡಿಸಿದ್ದರು.
ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಶಮಂತ್ ಕಳಕೋಡು ಗ್ರಾಮಕ್ಕೆತನ್ನ ಪಿಕಪ್ ನಲ್ಲಿ ತೋಟದ ಕಾರ್ಮಿಕರನ್ನು ಬಿಟ್ಟು ಗುರುವಾರ ಮಧ್ಯಾಹ್ನ ಕಳಸದ ಕಡೆ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಧಾರಾಕಾರ ಮಳೆಯಾಗುತ್ತಿದ್ದ ಕಾರಣ ಹೊಸೂರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಪಿಕಪ್ ಭದ್ರಾ ನದಿಗೆ ಉರುಳಿಬಿದ್ದಿದೆ. ಈ ವೇಳೆ ಚಾಲಕ ಶಮಂತ್ ಕೂಡ ನದಿಪಾಲಾಗಿ ನೀರಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದರೆನ್ನಲಾಗಿದೆ.
ನಿನ್ನೆ ಸಂಜೆ ವೇಳೆ ಸ್ಥಳದಲ್ಲಿ ಅಪಘಾತದ ಕುರುಹು ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ತೀವ್ರ ಹುಡುಕಾಟ ನಡೆಸಿದರೂ ನದಿಗೆ ಬಿದ್ದ ವಾಹನ ಹಾಗೂ ಚಾಲಕನ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಶಮಂತ್ ಅವರ ಪಿಕಪ್ ವಾಹನ ಎಂದು ತಿಳಿದುಬಂದಿದೆ.
ಈ ಮಧ್ಯೆ ಶಮಂತ್ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು, ಅವರು ಮನೆಗೆ ಹಿಂದಿರುಗದಿರುವುದು ಮತ್ತು ಅವರು ಕಾರ್ಮಿಕರೊಂದಿಗೆ ಕಳಕೋಡು ಗ್ರಾಮಕ್ಕೆ ತೆರಳಿ ಹಿಂದಿರುಗಿರುವುದರಿಂದ ಶಮಂತ್ ಹಾಗೂ ಪಿಕಪ್ ವಾಹನ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವುದು ಖಾತ್ರಿಯಾಗಿದೆ.
ವಿಷಯ ತಿಳಿದ ಶಮಂತ್ ಪೋಷಕರು ಸ್ಥಳಕ್ಕೆ ಆಗಮಿಸಿ ಕಣ್ಣೀರು ಹಾಕಿದ್ದರು. ಬಳಿಕ ಮನೆಗೆ ಹಿಂದಿರುಗಿದ್ದ ರವಿಕಲಾ ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ಶಮಂತ್ ಗಾಗಿ ಮುಂದುವರಿದ ಶೋಧ:
ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಶಮಂತ್ ಪತ್ತೆ ಕಾರ್ಯಾಚರಣೆಗೆ ತೊಡಕುಂಟಾಗಿದೆ. ಪೊಲೀಸರು, ಸಾರ್ವಜನಿಕರು ತೀವ್ರ ಹುಡುಕಾಟ ನಡೆಸುತ್ತಿದ್ದು, ಶಮಂತ್ ಮತ್ತು ಅವರ ಪಿಕಪ್ ಪತ್ತೆಯಾಗಿಲ್ಲ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಶೋಧ ಕಾರ್ಯಕ್ಕೆ ಭಾರೀ ತೊಂದರೆಯಾಗಿದೆ.







