ಕೊಪ್ಪ | ಶಿಕ್ಷಕಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯ ಬಂಧನ

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಕೊಗ್ರೆ ಸರಕಾರಿ ಶಾಲೆಯ ಅತಿಥಿ ಶಿಕ್ಷಕಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಜಯಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಶಿಕ್ಷಕಿ ಅಪೂರ್ವ(42)ರ ಸಂಬಂಧಿಕನೇ ಆಗಿರುವ ಭವಿತ್ (28) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಮ ವೈಫಲ್ಯವೇ ಹಲ್ಲೆಗೆ ಕಾರಣ ಎಂದು ತಿಳಿದು ಬಂದಿದೆ.
ಭವಿತ್ ಶಿಕ್ಷಕಿ ಅಪೂರ್ವರನ್ನು ಪ್ರೀತಿಸುತ್ತಿದ್ದು, ಅಪೂರ್ವ ಪ್ರೀತಿಯನ್ನು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಭವಿತ್ ಮಂಗಳವಾರ ಸಂಜೆ ಅಪೂರ್ವ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ದಾರಿಮಧ್ಯೆ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾನೆ. ಅಪೂರ್ವರನ್ನು ಅಡಿಕೆಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಪೂರ್ವ ಪ್ರಜ್ವಾಹೀನ ಸ್ಥಿತಿಗೆ ತಲುಪಿದ್ದರು. ಸ್ಥಳೀಯರು ಗಮನಿಸಿ ಅವರನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಕ್ಷಕಿಯನ್ನು ದಾಖಲಿಸಲಾಗಿದೆ.
ಹಲ್ಲೆ ಬಳಿಕ ಆರೋಪಿ ನಾಪತ್ತೆಯಾಗಿದ್ದು, ಬುಧವಾರ ಆತನನ್ನು ಬಂಧಿಸಲಾಗಿದೆ.





