ಕೊಪ್ಪ | ಕೃತಕ ಅರಣ್ಯ ಸೃಷ್ಟಿಗೆ ಯತ್ನ ಆರೋಪ: ಹೆಡತಾಳು ಗ್ರಾಮದಲ್ಲಿ ಗಿರಿ ಜನರಿಂದ ಪ್ರತಿಭಟನೆ

ಚಿಕ್ಕಮಗಳೂರು: ಜೀವವೈವಿಧ್ಯ ಪರಿಸರ ಹೊಂದಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಕೃತಕ ಅರಣ್ಯ ಸೃಷ್ಟಿಗೆ ಮುಂದಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೆಡತಾಳು ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.
ಹೆಡತಾಳು ಗ್ರಾಮ ಕಾಡು ಮತ್ತು ಬೋಳುಗುಡ್ಡ ಹೊಂದಿರುವ ಜೀವ ವೈವಿಧ್ಯತೆ ಅರಣ್ಯ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ಹೊಂದಿಕೊಂಡು ಅನೇಕ ಗಿರಿಜನರು ವಾಸಿಸುತ್ತಿದ್ದಾರೆ. ಅರಣ್ಯ ಇಲಾಖೆ ಇಲ್ಲಿರುವ ಕೆಲ ಮರ ಮತ್ತು ಗಿಡಗಳನ್ನು ಕತ್ತರಿಸಿ ಹೊಸದಾಗಿ ಅಕೇಶಿಯಾ, ನೀಲಗಿರಿಯಂತಹ ಗಿಡ ನೆಡಲು ಮುಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶುಕ್ರವಾರ ಜೆಸಿಬಿ ತಂದು ಹೊಸದಾಗಿ ಗಿಡ ನೆಡಲು ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ತಡೆದಿರುವ ಸ್ಥಳೀಯರು, ಇರುವ ಕಾಡು, ಪರಿಸರ ಉಳಿಸಿದರೆ ಸಾಕು ಕೃತಕ ಕಾಡು ನಿರ್ಮಿಸುವ ಅಗತ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡ ನೆಡುವ ಕೆಲಸವನ್ನು ಸ್ಥಗಿತಗೊಳಿಸಿದೆ. ಇರುವ ಕಾಡು ತೆರವು ಮಾಡಿ ಹೊಸದಾಗಿ ಗಿಡ ನೆಡಲು ಮುಂದಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.







