ಕುದುರೆಮುಖ ಪೊಲೀಸರಿಂದ ದಲಿತ ಯುವಕನ ಮೇಲೆ ಹಲ್ಲೆ: ಆರೋಪ
ಎಸ್ಪಿಗೆ ದೂರು

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಕಳಸ ತಾಲೂಕಿನ ಕುದುರೆಮುಖ ಪೊಲೀಸ್ ಠಾಣೆ ಸಿಬ್ಬಂದಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ದಲಿತ ಯುವಕನ ಕುಟುಂಬಸ್ಥರು ಎಸ್ಪಿಗೆ ದೂರು ನೀಡಿದ್ದಾರೆ.
ಕಳಸ ತಾಲೂಕಿನ ಎಸ್ಟೇಟ್ವೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ನಾಗೇಶ್ ಹಲ್ಲೆಗೊಳಗಾದ ಯುವಕ. ಗುರುವಾರ ರಾತ್ರಿ ಕುದುರೆಮುಖ ಸಮೀಪದ ರಸ್ತೆಯಲ್ಲಿ ಬರುತ್ತಿದ್ದಾಗ ಪಿಕಪ್ ವಾಹನವನ್ನು ನಿಲ್ಲಿಸಿದ ಕುದುರೆಮುಖ ಪೊಲೀಸ್ ಠಾಣೆ ಸಿಬ್ಬಂದಿ, ಮದ್ಯಪಾನ ಮಾಡಿದ್ದೀಯಾ ಎಂದು ಆರೋಪಿಸಿ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆಂದು ದಲಿತ ಯುವಕ ನಾಗೇಶ್ ಆರೋಪಿಸಿದ್ದಾನೆ. ಹಲ್ಲೆಯಿಂದಾಗಿ ಯುವಕನ ಎದೆ, ಕಣ್ಣಿಗೆ ಗಾಯವಾಗಿದ್ದು, ಆತನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಯುವಕ ದೂರು ನೀಡುವ ಭೀತಿಯಿಂದ ಪೊಲೀಸ್ ಸಿಬ್ಬಂದಿ ರಾಜಿ ಸಂಧಾನಕ್ಕೆ ಕರೆದು ಹಣ ನೀಡುವುದಾಗಿ ಹೇಳಿದ್ದಾರೆಂದು ಯುವಕ ಆರೋಪಿಸಿದ್ದು, ತನಗೆ ಹಣ ಬೇಡ ನ್ಯಾಯಬೇಕು ಎಂದು ಆಗ್ರಹಿಸಿ ಯುವಕನ ಪೋಷಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೊಪ್ಪ ಡಿವೈಎಸ್ಪಿಗೆ ದೂರು ನೀಡಿದ್ದರು. ಆದರೆ, ಎಸ್ಪಿಗೆ ದೂರು ನೀಡುತ್ತಿದ್ದಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಎಂದು ತನ್ನ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದು ಯುವಕ ಆರೋಪಿಸಿದ್ದಾನೆ.





