ಮೂಡಿಗೆರೆ | ಜೀವನಕ್ಕೆ ಆಸರೆಯಾಗಿದ್ದ ಜಮೀನು ಸರ್ಫೇಸಿ ಕಾಯ್ದೆಯಿಂದ ಹರಾಜು
ದಯಾಮರಣಕ್ಕೆ ಅವಕಾಶ ಕೋರಿ ತಹಶೀಲ್ದಾರ್‌ಗೆ ಮನವಿ

ಮೂಡಿಗೆರೆ : ಜೀವನಕ್ಕೆ ಆಸರೆಯಾಗಿದ್ದ ಜಮೀನನ್ನು ಸರ್ಫೇಸಿ ಕಾಯ್ದೆ ಹೆಸರಿನಲ್ಲಿ ಬ್ಯಾಂಕಿನವರು ಹರಾಜು ಮಾಡಿರುವುದರಿಂದ ದಯಾಮರಣಕ್ಕೆ ಅವಕಾಶ ಕೋರಿ ರೈತ ಡಿ.ಆರ್.ವಿಜಯ ಮತ್ತು ಪತ್ನಿ ಎಚ್.ಎನ್.ಪಾರ್ವತಿ ದಂಪತಿ ಶುಕ್ರವಾರ ತಹಶೀಲ್ದಾರ್ ರಾಜಶೇಖರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಆರ್.ವಿಜಯ, ತಾಲೂಕಿನ ಕಲ್ಲೂಮ ಗ್ರಾಮದ ಸ.ನಂ 40/2 ರಲ್ಲಿ ತನ್ನ ಹೆಸರಿನಲ್ಲಿ 4 ಎಕರೆ ಕಾಫಿ ತೋಟದ ದಾಖಲೆ ನೀಡಿ 25.90 ಲಕ್ಷ ರೂ. ಹಾಗೂ ಪತ್ನಿ ಎಚ್.ಎನ್.ಪಾರ್ವತಿ ಕೆಲ್ಲೂರು ಗ್ರಾಮದ ಸ.ನಂ 40/1 ರಲ್ಲಿ 3.39 ಎಕರೆ ಜಮೀನಿನ ಮೇಲೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 6 ಲಕ್ಷ ರೂ. ಕೃಷಿ ಸಾಲ ಮಾಡಿದ್ದೆವು. ಬೆಳೆ ನಷ್ಟ, ಬೆಲೆ ಏರಿಳಿತ, ಕೋವಿಡ್ ಸಂಕಷ್ಟ, ಹವಾಮಾನ ವೈಪರೀತ್ಯ, ಕಾಡುಪ್ರಾಣಿಗಳ ಹಾವಳಿಯಿಂದಾಗಿ ಸಕಾಲದಲ್ಲಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
2024ರಲ್ಲಿ 5.30 ಲಕ್ಷ ರೂ. ಸಾಲದ ಬಾಬ್ತು ಪಾವತಿ ಮಾಡಲಾಗಿದ್ದು, ಸಾಲ ಮರುಪಾವತಿಸಲು ಕಾಲಾವಕಾಶ ನೀಡುತ್ತೇವೆಂದು ಬ್ಯಾಂಕ್‌ನವರು ತಿಳಿಸಿದ್ದರು. ಆದರೆ, ಬ್ಯಾಂಕ್‌ನವರು ನಮ್ಮ ಗಮನಕ್ಕೆ ಬಾರದ ಸರ್ಫೇಸಿ ಕಾಯ್ದೆ ಮುಂದಿಟ್ಟುಕೊಂಡು 3 ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ಕೇವಲ 89.50 ಲಕ್ಷ ರೂ.ಗೆ ಆನ್‌ಲೈನ್ ಮೂಲಕ ಏಕಾಏಕಿ ಹರಾಜು ಮಾಡಿ, ಬೆಂಗಳೂರಿನವರಿಗೆ ನೀಡಲಾಗಿದೆ. ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ನಮಗೆ ಈ ಜಮೀನು ಬಿಟ್ಟರೆ ಬೇರೆ ಜೀವನ ಮಾರ್ಗವಿಲ್ಲ. ನಾವು ಈಗಾಗಲೇ ಹಿರಿಯ ನಾಗರಿಕರಾಗಿದ್ದು, ಬೇರೆ ದುಡಿಮೆಯ ದಾರಿ ಯಾವುದೂ ತೋಚುತ್ತಿಲ್ಲವೆಂದು ವಿಜಯ ಅಳಲು ತೋಡಿಕೊಂಡರು.
ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್‌ಕುಮಾರ್ ಮಾತನಾಡಿ, ಸರ್ಫೇಸಿ ಕಾಯ್ದೆಯಿಂದಾಗಿ ದಯಾಮರಣ ಕೋರಿರುವ ಘಟನೆ ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 2,700 ಸರ್ಫೇಸಿ ಕಾಯ್ದೆಯೊಳಪಟ್ಟ ರೈತರಿದ್ದಾರೆ. ಅದರಲ್ಲಿ 400 ರೈತರು ಸಾಲ ಮರುಪಾವತಿ ಮಾಡಿದ್ದು, ಉಳಿದ 2,300 ರೈತರು ಜಮೀನು ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಬ್ಯಾಂಕ್‌ನವರು ಈ ಕಾಯ್ದೆ ಹೆಸರಿನಲ್ಲಿ ಹರಾಜು ಮಾಡಿ ಕೋಟ್ಯಾಂತರ ರೂ. ಬೆಲೆ ಬಾಳುವ ಜಮೀನನ್ನು ಕಡಿಮೆ ಮೊತ್ತದಲ್ಲಿ ಭೂಮಾಲಕರಿಗೆ ಜಮೀನು ಒದಗಿಸುವ ತಂತ್ರ ನಡೆಯುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಎಚ್ಚೆತ್ತುಕೊಂಡು ಸರ್ಫೇಸಿ ಕಾಯ್ದೆ ರದ್ದುಪಡಿಸಿ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.