Chikkamagaluru | ಫೇಸ್ಬುಕ್ ಜಾಹೀರಾತು ನಂಬಿ 1.28 ಕೋಟಿ ರೂ. ಕಳೆದುಕೊಂಡ ವ್ಯಕ್ತಿ!

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಫೇಸ್ಬುಕ್ ಜಾಹೀರಾತು ನಂಬಿ ವ್ಯಕ್ತಿಯೊಬ್ಬರು ಕೋಟ್ಯಂತರ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದ್ದು, ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ಬುಕ್ ಜಾಹೀರಾತು ನಂಬಿದ ಜಿಲ್ಲೆಯ ಕಡೂರು ತಾಲೂಕಿನ ಶಿವಪುರ ಗ್ರಾಮದ ವ್ಯಕ್ತಿಯೊಬ್ಬರು 1.28 ಕೋಟಿ ರೂ. ಕಳೆದುಕೊಂಡಿದ್ದಾರೆ. ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟಮೆಂಟ್ ಹೆಸರಿನಲ್ಲಿ ಹಣ ಕಟ್ಟಿಸಿಕೊಂಡು ವಂಚಿಸಲಾಗಿದೆ.
ʼಎಫ್ವೈಇಆರ್ಎಸ್ʼ ಎಂಬ ಟ್ರೇಡಿಂಗ್ ಜಾಹೀರಾತುನ್ನು ಫೇಸ್ಬುಕ್ನಲ್ಲಿ ನೋಡಿದ ಅವರು ಎಫ್-8ಎಫ್ವೈಇಆರ್ಎಸ್ ಸೆಕ್ಯೂರಿಟೀಸ್ ವಾಟ್ಸ್ ಆಪ್ ಗ್ರೂಪ್ ಸೇರಿದ್ದಾರೆ.
ಆನ್ಲೈನ್ ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಹೆಸರಿನಲ್ಲಿ ವ್ಯಕ್ತಿಗೆ ಹೆಚ್ಚಿನ ಲಾಭಗಳಿಸುವ ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ 1ಕೋಟಿ 28 ಲಕ್ಷ 10ಸಾವಿರ ರೂ. ಪಡೆದುಕೊಂಡಿದ್ದಾರೆ. ಆದರೆ, ಯಾವುದೇ ರೀತಿಯ ಲಾಭಾಂಶ ನೀಡಿಲ್ಲ. ಬಳಿಕ ತಾನು ವಂಚನೆಗೊಳಗಾಗಿರುವುದು ಅವರಿಗೆ ಗೊತ್ತಾಗಿದೆ.
ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




