ʼವಾಸಿಸುವವನೇ ಮನೆಯೊಡೆಯʼ ಯೋಜನೆಯ ಸದುಪಯೋಗಕ್ಕೆ ಶಾಸಕ ತಮ್ಮಯ್ಯ ಕರೆ

ಚಿಕ್ಕಮಗಳೂರು: ಬಡವರು ಹಾಗೂ ಶೋಷಿತ ವರ್ಗದವರು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುನ್ನಲೆಗೆ ಬರಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.
ತಾಲೂಕಿನ ಬಾಣೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರಕಾರದ ವಿಶೇಷ ಯೋಜನೆ "ವಾಸಿಸುವವನೇ ಮನೆಯ ಒಡೆಯ" ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅಧಿಕಾರವಧಿಯಲ್ಲಿ "ಉಳುವವನೇ ಭೂಮಿ ಒಡೆಯ" ಎಂಬ ಯೋಜನೆಯನ್ನು ಜಾರಿಗೆ ತಂದು ಹಕ್ಕುಪತ್ರ ನೀಡಿದ ಮಾದರಿಯಲ್ಲೇ ರಾಜ್ಯಸರ್ಕಾರ "ವಾಸಿಸುವವನೇ ಮನೆಯ ಒಡೆಯ" ಯೋಜನೆ ಜಾರಿಮಾಡಿ ಬಡವರಿಗೆ ಹಕ್ಕುಪತ್ರ ನೀಡಲು ಮುಂದಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ ಶಾಸಕರ ನೇತೃತ್ವದಲ್ಲಿ ಈ ಯೋಜನೆಯಡಿ ಗ್ರಾಮಗಳಲ್ಲಿ ಬಡವರು ವಾಸಿಸುವ ಫಲಾನುಭವಿಗಳನ್ನು ಗುರ್ತಿಸಿ ಹಕ್ಕುಪತ್ರಗಳನ್ನು ನೀಡುತ್ತಿರುವ ಜೊತೆಗೆ ಕಂದಾಯ ಗ್ರಾಮ ಮತ್ತು ಕಂದಾಯ ಉಪಗ್ರಾಮಗಳನ್ನು ಆಯ್ಕೆಮಾಡಲಾಗಿದೆ ಎಂದರು.
ಸರ್ಕಾರದ ಈ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಭದ್ರಾ ಉಪಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುದ್ದಲಿ ಪೂಜೆ ನೆರವೇರಿಸಲಿದ್ದು, ನಂತರ ಈ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಯಾಗಲಿದೆ ಎಂದು ಭರವಸೆ ನೀಡಿದ ಅವರು, ರೈತರ ತೆಂಗು, ಅಡಿಕೆ, ಶುಂಠಿ, ಟೊಮ್ಯಾಟೋ ಮುಂತಾದ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿದಾಗ ರೈತರು ಹಾಗೂ ರೈತಕಾರ್ಮಿಕರು ಸಂತೋಷವಾಗಿರುತ್ತಾರೆಂದು ಹೇಳಿದರು.
ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿರುವ ರಾಜ್ಯಸರ್ಕಾರ ಬಡವರ, ಶೋಷಿತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಸದೃಢಗೊಳಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಾಣೂರು ಗ್ರಾ.ಪಂ ಅಧ್ಯಕ್ಷೆ ಸುನಂದಮ್ಮ, ಸದಸ್ಯೆ ಉಮಾಭಾರ್ಗವ್, ಅಜ್ಜಯ್ಯ, ನವೀನ್, ಮಂಜುಳ, ಮಮತ, ಯಶೋಧ, ಕಡೂರು ತಹಶೀಲ್ದಾರ್ ಪೂರ್ಣಿಮ, ಇಓ ಪ್ರವೀಣ್, ರಾಜಸ್ವ ನಿರೀಕ್ಷಕ ರವಿ, ತಾ.ಪಂ ಮಾಜಿ ಸದಸ್ಯ ಧನಂಜಯ್ ಉಪಸ್ಥಿತರಿದ್ದರು.







