ದೀನದಯಾಳ್ ಉಪಾಧ್ಯಾಯರ ಅಂತ್ಯೋದಯದ ವಿಚಾರಗಳನ್ನು ಮೋದಿಯವರು ಕಾರ್ಯರೂಪಕ್ಕೆ ತಂದಿದ್ದಾರೆ: ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ
ಚಿಕ್ಕಮಗಳೂರು (ಕಡೂರು): ಪಂಡಿತ ದೀನದಯಾಳ್ ಉಪಾಧ್ಯಾಯರು ಒಬ್ಬ ಮಹಾನ್ ಮಾನವತಾವಾದಿ. ಸಮಾಜದ ಅತ್ಯಂತ ಹಿಂದುಳಿದ ವರ್ಗವನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮೇಲಕ್ಕೆತ್ತುವ ಮೂಲಕ ಅಂತ್ಯೋದಯದ ಕಲ್ಪನೆಯನ್ನು ನೀಡಿದರು. ಇಂದಿಗೆ ಆ ವಿಚಾರಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರ್ಯರೂಪಕ್ಕೆ ತಂದಿದ್ದಾರೆ. ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದ ಶ್ರೇಯಸ್ಸು ಮೋದಿಯವರಿಗೆ ಸಲ್ಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಕಡೂರು ಮಂಡಲ ಬಿಜೆಪಿ ವತಿಯಿಂದ ಪಂಡಿತ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು, ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಉಪಾಧ್ಯಾಯರು ಬಿಜೆಪಿಗೆ ಸಿದ್ಧಾಂತ ಹಾಗೂ ವೈಚಾರಿಕತೆಯನ್ನು ನೀಡಿದವರು. ಅವರ ‘ಏಕಾತ್ಮ ವಿಕಾಸ’ ತತ್ವವು ಪ್ರತಿಯೊಬ್ಬರ ಅಭಿವೃದ್ದಿಯ ಜೊತೆಗೆ ಸಮಾಜ ಮತ್ತು ರಾಷ್ಟ್ರದ ವಿಕಾಸವನ್ನೂ ಒಳಗೊಂಡಿತ್ತು. ಕಾಂಗ್ರೆಸ್ಗೆ ಪ್ರತಿರೋಧವಾಗಿ ಅವರು ನೀಡಿದ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ. ಅವರ ಅಕಾಲಿಕ ನಿಧನ ರಹಸ್ಯವಾಗಿಯೇ ಉಳಿದಿದ್ದರೂ, ಅವರ ವಿಚಾರಧಾರೆ ಇಂದಿಗೂ ನಮ್ಮನ್ನು ಮಾರ್ಗದರ್ಶಿಸುತ್ತಿದೆ ಎಂದರು.
ನಂಬರ್ ಒನ್ ಭಾರತ ಗುರಿ
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಇಂದು ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಬೊಮ್ಮಾಯಿ ಹೇಳಿದರು. ಮುಂದಿನ ಎರಡು ವರ್ಷಗಳಲ್ಲಿ ಭಾರತ ಮೂರನೇ ಸ್ಥಾನಕ್ಕೇರುವ ನಿರೀಕ್ಷೆ ಇದೆ. 2047ರಲ್ಲಿ ವಿಶ್ವದ ನಂಬರ್ ಒನ್ ಆರ್ಥಿಕ ಶಕ್ತಿ ಆಗಬೇಕೆಂಬುದು ಪ್ರಧಾನಮಂತ್ರಿಯವರ ಕನಸು. ಅದನ್ನು ಸಾಕಾರಗೊಳಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಭಾರತೀಯರ ಮೇಲಿದೆ. ಪಕ್ಷದ ಸಂಘಟನೆಯನ್ನು ಬಲಪಡಿಸಿ, ಮೋದಿಯವರೊಂದಿಗೆ ಕೈಜೋಡಿಸಿ, ಶ್ರೇಷ್ಠ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ ಎಂದು ಬೊಮ್ಮಾಯಿ ಕರೆ ನೀಡಿದರು.







