ಮೂಡಿಗೆರೆ | ಸಿಸಿ ಕ್ಯಾಮರದಲ್ಲಿ ಹುಲಿ ಸಂಚಾರ ಸೆರೆ; ಗ್ರಾಮಸ್ಥರಲ್ಲಿ ಆತಂಕ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯಪ್ರಾಣಿಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮೂಡಿಗೆರೆ ತಾಲೂಕಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಸಿಸಿ ಟಿವಿ ಕ್ಯಾಮರದಲ್ಲಿ ಹುಲಿಯ ಚಲನವಲನ ಸೆರೆಯಾಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ.
ಮೂಡಿಗೆರೆ ತಾಲೂಕಿನ ಭಾರತೀಬೈಲು, ಬಿ.ಹೊಸಳ್ಳಿ ಗ್ರಾಮದಲ್ಲಿ ಹುಲಿಯ ಚಲನವಲನ ಕಾಣಿಸಿಕೊಂಡಿದ್ದು ಇಲ್ಲಿನ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿದೆ. ಹುಲಿ ಹಸುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಭಾರತೀಬೈಲು ಗ್ರಾಮ ಸಮೀಪದ ಅರಣ್ಯದಲ್ಲಿ ಸಿಸಿ ಟಿವಿ ಕ್ಯಾಮಾರ ಅಳವಡಿಸಲಾಗಿತ್ತು. ಸಿಸಿ ಟಿವಿಯಲ್ಲಿ ಹುಲಿಯ ಚಲನವಲನ ಸೆರೆಯಾಗಿದೆ. ಹುಲಿ ಕಾಣಿಸಿಕೊಂಡ ಪರಿಣಾಮ ಇಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಕಾಫಿ, ಅಡಿಕೆ ಬೆಳೆಗಾರರು ಹೈರಾಣಾಗಿ ಹೋಗಿದ್ದಾರೆ, ಅನೇಕ ಮಂದಿ ರೈತರು, ಕಾರ್ಮಿಕರು ಕಾಡಾನೆಗಳ ದಾಳಿಯಿಂದಾಗಿ ಈಗಾಗಲೇ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಈ ಬೇಡಿಕೆಗೆ ಸರಕಾರ ಇದುವರೆಗೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ, ಈ ನಡುವೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಹುಲಿ, ಚಿರತೆಗಳ ಹಾವಳಿ ಹೆಚ್ಚಾಗುತ್ತಿರುವುದು ರೈತರನ್ನು ನಿದ್ದೆ ಗೆಡುವಂತೆ ಮಾಡಿದೆ.
ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ, ಕುದುರೆಮುಖ, ಹೊರನಾಡು ಭಾಗದಲ್ಲಿ ಚಿರತೆಯೊಂದು ಸಾಕು ನಾಯಿಗಳನ್ನು ಹೊತ್ತೊಯ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಸದ್ಯ ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.
ಮುಳ್ಳಯ್ಯನಗಿರಿ ಭಾಗದಲ್ಲೂ ಹುಲಿಗಳ ಸಂಚಾರ
ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುಳ್ಳಯ್ಯನಗಿರಿ ಭಾಗದಲ್ಲಿ ಶುಕ್ರವಾರ ಸ್ಥಳೀಯರಿಗೆ ಮೂರು ಹುಲಿಗಳು ಕಾಣಿಸಿಕೊಂಡಿದ್ದು, ಇದು ಸ್ಥಳೀಯರೂ ಸೇರಿದಂತೆ ಪ್ರವಾಸಿಗರು, ಕಾಫಿ ತೋಟಗಳ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.
ಮುಳ್ಳಯ್ಯನ ಗಿರಿ ಸಮೀಪದ ಸೀತಾಳಯ್ಯನಗಿರಿ, ಪಾಂಡರವಳ್ಳಿ ಭಾಗದಲ್ಲಿ ಮರಿ ಹುಲಿ ಸೇರಿದಂತೆ ಒಟ್ಟು ಮೂರು ಹುಲಿಗಳು ಸಂಚಾರ ಮಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದು, ಆತಂಕಗೊಂಡಿರುವ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಹುಲಿಗಳು ಸಂಚರಿಸಿದ್ದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿಗಳ ಸಂಚಾರವನ್ನು ಖಾತ್ರಿ ಪಡಿಸಿದ್ದಾರೆ. ಅಲ್ಲದೇ ಪ್ರವಾಸಿಗರು, ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಈ ಭಾಗದಲ್ಲಿ ಅನೇಕ ಕಾಫಿ ತೋಟಗಳಿದ್ದು, ಸದ್ಯ ಕಾಫಿ ಕಟಾವು ನಡೆಯುತ್ತಿರುವುದರಿಂದ ಹುಲಿಗಳ ಒಡಾಟದ ಸುದ್ದಿ ಕಾರ್ಮಿಕರಲ್ಲೂ ಆತಂಕ ಮೂಡಿಸಿದೆ. ಮುಳ್ಳಯ್ಯನಗಿರಿ ನೋಡಲು ವಾರಾಂತ್ಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದು ಸಾಮಾನ್ಯವಾಗಿದ್ದು, ಹುಲಿಗಳ ಸಂಚಾರ ಪ್ರವಾಸಿಗರಲ್ಲೂ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಹುಲಿಗಳ ಸಂಚಾರದಿಂದ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.







