ಮೂಡಿಗೆರೆ | ಕಾಡುಕೊಣ ದಾಳಿ: ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ(PC:Meta AI)
ಚಿಕ್ಕಮಗಳೂರು : ಕಾಡುಕೋಣ ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ರವಿವಾರ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ದುರ್ಗದಹಳ್ಳಿ ಗ್ರಾಮದ ನಿವಾಸಿ ರಮೇಶ್(52) ಎಂದು ಗುರುತಿಸಲಾಗಿದೆ. ರವಿವಾರ ದುರ್ಗದಹಳ್ಳಿಯ ತಮ್ಮ ಮನೆಯಿಂದ ಬಾಳೂರಿಗೆ ಹೊರಟಿದ್ದ ರಮೇಶ್ ಕಾಫಿತೋಟವೊಂದರ ಬಳಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾಫಿತೋಟದಲ್ಲಿದ್ದ ಕಾಡುಕೋಣ ರಮೇಶ್ ಮೇಲೆ ದಿಢೀರ್ ದಾಳಿ ನಡೆಸಿದೆ ಎನ್ನಲಾಗಿದೆ.
ದಾಳಿಯಿಂದಾಗಿ ರಮೇಶ್ ಅವರ ತಲೆ, ಹೊಟ್ಟೆಗೆ ತೀವ್ರತರವಾದ ಗಾಯವಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಬಾಳೂರು ಪಿಎಸ್ಸೈ ದಿಲೀಪ್ ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಸ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾಫಿನಾಡಿನಲ್ಲಿ ಒಂದೆಡೆ ಕಾಡಾನೆಗಳ ಹಾವಳಿ ಮಿತಿ ಮೀರಿದ್ದರೆ, ಮತ್ತೊಂದೆಡೆ ಕಾಡುಕೋಣಗಳ ಹಾವಳಿಯೂ ಎಗ್ಗಿಲ್ಲದಂತೆ ಮುಂದುವರಿದಿದೆ. ಕಾಡಾನೆಗಳು ಮತ್ತು ಕಾಡುಕೋಣಗಳ ಹಾವಳಿಯಿಂದಾಗಿ ಕಾಫಿನಾಡಿನಲ್ಲಿ ಕಾರ್ಮಿಕರು, ರೈತರು, ಸಾರ್ವಜನಿಕರು, ಶಾಲಾ ಕಾಲೇಜು ಮಕ್ಕಳು ಜೀವ ಭಯದಲ್ಲಿ ಬದುಕುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದು, ಕಡಾನೆಗಳು, ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.