ಹಿರಿಯ ಪತ್ರಕರ್ತ ಎಂ.ಯೂಸುಫ್ ಪಟೇಲ್‌ಗೆ ಕೆಯುಡಬ್ಲ್ಯೂಜೆ ʼಪಿ.ಆರ್.ರಾಮಯ್ಯ ಸ್ಮಾರಕ ಪ್ರಶಸ್ತಿʼ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಪಿ.ಆರ್.ರಾಮಯ್ಯ ಸ್ಮಾರಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎಂ.ಯೂಸುಫ್ ಪಟೇಲ್ ಭಾಜನರಾಗಿದ್ದಾರೆ.
ಕೊಪ್ಪ ತಾಲ್ಲೂಕಿನ ಜಯಪುರದ ಮುಹಮ್ಮದ್ ಮತ್ತು ಮರಿಯಮ್ಮ ದಂಪತಿಯ ಪುತ್ರರಾಗಿ ಜನಿಸಿದ ಎಂ.ಯೂಸುಫ್ ಪಟೇಲ್ ಅವರು, ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಜಯಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿ, ಪ್ರೌಢಶಾಲಾ ಶಿಕ್ಷಣವನ್ನು ಅಯಪುರ ಪ್ರೌಢಶಾಲೆಯಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಶೃಂಗೇರಿಯ ಕಾಲೇಜಿನಲ್ಲಿ ಪೂರೈಸಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಬಿ.ಎ.ಪದವಿ ಪಡೆದಿದ್ದಾರೆ.
1990ರಲ್ಲಿ ಕೊಪ್ಪದ ಮುಂಜಾವು ಪತ್ರಿಕೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ವರದಿ ಮಾಡುವ ಮೂಲಕ ಪತ್ರಿಕಾ ರಂಗಕ್ಕೆ ಎಂ.ಯೂಸುಫ್ ಪಟೇಲ್ ಪ್ರವೇಶಿಸಿದರು. ಬಳಿಕ ಕೊಪ್ಪದ 'ಸುದ್ದಿ ವಿಪ್ಲವ', ಚಿಕ್ಕಮಗಳೂರಿನ 'ಮಲೆನಾಡು ಸಂಗಾತಿ', 'ಹೊಸದಿಗಂತ', 'ಜನಮಿತ್ರ', 'ಸುದ್ದಿ ಮಾಧ್ಯಮ', ಕೊಡಗಿನ 'ಶಕ್ತಿ ಕೊಡಗು', ರಾಜ್ಯಮಟ್ಟದ 'ವಾರ್ತಾ ಭಾರತಿ' ಪತ್ರಿಕೆಗಳಲ್ಲಿ ವರದಿಗಾರರಾಗಿ ಅವರು ಸೇವೆ ಸಲ್ಲಿದ್ದಾರೆ.
ಎಂ.ಯೂಸುಫ್ ಅವರು 'ಚಿಕ್ಕಮಗಳೂರು ಹೆರಾಲ್ಡ್' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಕೊಪ್ಪ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿಯಾಗಿ, ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಎರಡು ಅವಧಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಪತ್ರಿಕಾರಂಗದ ಜೊತೆಗೆ ಸಾಮಾಜಿಕ ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಎಂ.ಯೂಸುಫ್ ಪಟೇಲ್ ಅವರು ಜಯಪುರ ಸಮೀಪದ ಜಲದುರ್ಗದಲ್ಲಿ ನಿವೇಶನ ರಹಿತರ ಪರ ಹೋರಾಟ ರೂಪಿಸಿ ಬಡವರಿಗೆ ನಿವೇಶನ ಕೊಡಿಸುವಲ್ಲಿಯೂ ಯಶಸ್ವಿಯಾಗಿದ್ದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಎದುರಾಗುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನೂರಾರು ವರದಿಗಳು, ಲೇಖನಗಳನ್ನು ಬರೆದು ಸರಕಾರದ ಗಮನಕ್ಕೆ ತಂದು ಆ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.