ರಾಮ ಮಂದಿರ ಉದ್ಘಾಟನೆ ಸಂದರ್ಭ ಕೋಮು ಗಲಭೆಗೆ ಕಾಂಗ್ರೆಸ್ ಸಂಚು: ಶೋಭಾ ಕರಂದ್ಲಾಜೆ ಆರೋಪ
ಚಿಕ್ಕಮಗಳೂರು, ಜ.7: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಸಂದರ್ಭದಲ್ಲಿ ಕೋಮು ಗಲಭೆ ನಡೆಸಲು ಕಾಂಗ್ರೆಸ್ ಸಂಚು ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರವಿವಾರ ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ಮಂತ್ರಾಕ್ಷತೆ ಮತ್ತು ಕರಪತ್ರವನ್ನು ಮನೆಮನೆಗೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದಕ ಮಾನಸಿಕತೆಯ ಜನರಿಗೆ ಭಯ ಹುಟ್ಟಿದೆ. ಈ ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ಮತ್ತೊಮ್ಮೆ ಕೋಮು ಗಲಭೆ ಸೃಷ್ಟಿಸಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ. ಅದರ ಒಂದು ಚಿಕ್ಕ ಝಲಕ್ ಬಿ.ಕೆ.ಹರಿಪ್ರಸಾದ್ ಇತ್ತೀಚೆಗೆ ನೀಡಿರುವ ಹೇಳಿಕೆ ಆಗಿರಬಹುದು ಎಂದರು.
ಕಾಂಗ್ರೆಸ್ ಮಾನಸಿಕ ಸ್ಥಿತಿ ದೇಶದಲ್ಲಿ ದೇಶದಲ್ಲಿ ಕೋಮು ಗಲಭೆ ಎಬ್ಬಿಸುವುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆದಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಯೋತ್ಪಾದನೆಗೆ ಸಂಪೂರ್ಣ ಕಡಿವಾಣ ಬಿದ್ದಿದೆ. ದೇಶ ಶಾಂತವಾಗಿದೆ ಎಂದು ಶೋಭಾ ನುಡಿದರು
2017ರಲ್ಲಿ ನಡೆದ ದತ್ತಜಯಂತಿ ಸಂದರ್ಭದಲ್ಲಿ ನಡೆದ ಗಲಾಟೆ ಕುರಿತು ಪ್ರತಿಕ್ರಿಯಿಸಿ, ಪಿಎಫ್ಐ ನಂತಹ ದೇಶ ದ್ರೋಹ, ಭಯೋತ್ಪಾದಕರ ಕೇಸ್ ಗಳನ್ನು ಕ್ಯಾಬಿನೆಟ್ ಗೆ ತಂದು ಹಿಂಪಡೆಯುವುದು ಕಾಂಗ್ರೆಸ್ ಸರ್ಕಾರದ ರಾಜಕೀಯ ನೀತಿ. ಅವರು, ದೇಶಭಕ್ತರು ಇದ್ದರೇ, ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದಾರೆ ಅವರ ಕೇಸ್ ರೀ ಓಪನ್ ಮಾಡುವುದು, ರಾಜ್ಯ ದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಂಚು ನಡೆದಿದ್ದರೂ, ರಾಜ್ಯ ಸರ್ಕಾರ ಗಂಭೀರವಾಗಿ ತಗೆದು ಕೊಳ್ಳುತ್ತಿಲ್ಲ. ಭಯೋತ್ಪಾದಕ ರನ್ನು, ದೇಶದ್ರೋಹಿಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.