ಚಿಕ್ಕಮಗಳೂರು | ಹೈಕೋರ್ಟ್ ಆದೇಶದಂತೆ ಅನಧಿಕೃತ ಕಟ್ಟಡ ತೆರವು : ಜಾಮಿಯಾ ಮಸೀದಿ ಸ್ಪಷ್ಟನೆ

ಚಿಕ್ಕಮಗಳೂರು : ಜಾಮಿಯಾ ಮಸೀದಿಗೆ ಸೇರಿದ್ದ ಬಡಾ ಮಕಾನ್ ಎಂಬ ಜಾಗದ ಕಟ್ಟಡದಲ್ಲಿ 40 ವರ್ಷಗಳಿಂದ ಅನಧಿಕೃತವಾಗಿ ಬಾಡಿಗೆಗೆ ಇದ್ದ ಹೊಟೇಲ್ ಅನ್ನು ನ್ಯಾಯಾಲಯದ ಆದೇಶದಂತೆ ವಕ್ಫ್ ಬೋರ್ಡ್ ಅಧಿಕಾರಿಯ ಸಮ್ಮುಖದಲ್ಲೇ ತೆರವು ಮಾಡಲಾಗಿದೆ ಎಂದು ಜಾಮಿಯಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮುದಾಸ್ಸಿರ್ ಪಾಶ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಾಮಿಯಾ ಮಸೀದಿ ವತಿಯಿಂದ ಬಾಡಿಗೆದಾರರಿಗೆ ಮುಂಚಿತವಾಗಿ ತೆರವಿಗೆ ತಿಳಿಸಿದ್ದರಿಂದ ಅವರು ಕಳೆದ ಶನಿವಾರ ತೆರವಿಗೆ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಾ.4ರಂದು ಮಂಗಳವಾರ ಕಟ್ಟಡ ತೆರವು ಮಾಡಿದ್ದು, ಈ ವೇಳೆ ಯಾವುದೇ ಸಂಘರ್ಷ, ಗೊಂದಲ ಉಂಟಾಗಿಲ್ಲ. ಕಟ್ಟಡ ತೆರವು ಮಾಡುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಖುದ್ದು ಭೇಟಿ ಮಾಡಿ ಭದ್ರತೆ ನೀಡಲು ಕೋರಲಾಗಿತ್ತು, ಆದರೆ ನ್ಯಾಯಾಲಯದ ಆದೇಶದಲ್ಲಿ ಭದ್ರತೆ ಒದಗಿಸುವ ವಿಚಾರ ಪ್ರಸ್ತಾಪಿಸಿಲ್ಲ ಎಂದು ಎಸ್ಪಿ ಹೇಳಿದ್ದರು. ಕಟ್ಟಡ ತೆರವು ಮಾಡುವ ವಿಚಾರವನ್ನು ಪೊಲೀಸ್ ಇಲಾಖೆಗೆ ತಿಳಿಸಿಲ್ಲ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಾಮಿಯಾ ಮಸೀದಿ ಸದಸ್ಯರಾದ ಮುಸ್ತಫಾ ಇಮ್ರಾಝ್, ಮುಹಮ್ಮದ್ ಅಬ್ರಾರ್, ಅಬ್ದುಲ್ ವಾಜಿದ್ ಖಾನ್, ಅಬ್ದುಲ್ ರೆಹಮಾನ್, ಎಂ. ಅಬ್ರಾರ್, ಮುಹಮ್ಮದ್ ಅಬೂಬಕರ್, ಇರ್ಫಾನ್ ಮತ್ತಿತರರಿದ್ದರು.
ನ್ಯಾಯಾಲಯದ ಆದೇಶದಂತೆ ಕಟ್ಟಡ ತೆರವು ಮಾಡಲಾಗಿದೆ. ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸಿರುವುದಲ್ಲದೇ ಜಾಮಿಯಾ ಮಸೀದಿ ಆಡಳಿತ ಮಂಡಳಿ ಸದಸ್ಯರು, ವಕ್ಫ್‌ಬೋರ್ಡ್ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಹರೀಶ್ ಎಂಬವರು ದೂರು ನೀಡಿದ್ದು, ಈ ವ್ಯಕ್ತಿ ಯಾರೆಂದು ಯಾರಿಗೂ ತಿಳಿದಿಲ್ಲ. ಈ ವ್ಯಕ್ತಿಗೂ ಬಡಾ ಮಕಾನ್ ಜಾಗದಲ್ಲಿರುವ ಕಟ್ಟಡಕ್ಕೂ ಸಂಬಂಧವೇ ಇಲ್ಲ. ಆದರೆ ಪೊಲೀಸರು ಅನಾಮಧೇಯ ವ್ಯಕ್ತಿ ನೀಡಿರುವ ದೂರನ್ನು ಪರಿಶೀಲಿಸದೆ ಮಸೀದಿ ಆಡಳಿತ ಮಂಡಳಿಯ ಸದಸ್ಯರೂ ಸೇರಿದಂತೆ 14ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಂದು ನಗರದಲ್ಲೇ ಇರದ ವ್ಯಕ್ತಿಗಳು ಹಾಗೂ ಅನಾಮಧೇಯ ವ್ಯಕ್ತಿಗಳ ವಿರುದ್ಧವೂ ದೂರು ದಾಖಲಿಸಲಾಗಿದ್ದು, ಪೊಲೀಸರ ಈ ನಡೆ ಸಂಶಯಾಸ್ಪದವಾಗಿದೆ.
-ಮುದಾಸ್ಸಿರ್, ಜಾಮಿಯಾ ಮಸೀದಿ ಅಧ್ಯಕ್ಷ
ನಿಷೇಧಾಜ್ಞೆ ಜಾರಿ :
ನಗರದ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಡಾ ಮಕಾನ್ ದರ್ಗಾವನ್ನು ಹೊರತುಪಡಿಸಿ ಅದರ ಪಕ್ಕದಲ್ಲಿ ಇರುವ ವಿವಾದಿತ ಸ್ಥಳದಲ್ಲಿ ಯಾರು ಕೂಡ ಪ್ರವೇಶ, ಕಟ್ಟಡ ನಿರ್ಮಾಣ, ತೆರವು ಮತ್ತು ಪ್ರತಿಭಟನೆ ಹಾಗೂ ಯಾವುದೇ ರೀತಿಯ ಚಟುವಟಿಕೆಗಳನ್ನು ಮಾರ್ಚ್ 10ರ ಮಧ್ಯರಾತ್ರಿ 12:00 ಗಂಟೆಯ ವರೆಗೆ ಮಾಡಬಾರದು.
ಈ ವಿವಾದಿತ ಸ್ಥಳದಲ್ಲಿ ಸಾರ್ವಜನಿಕ ಶಾಂತಿ, ಸಂರಕ್ಷಣಾ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಮಗಳೂರು ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಡಾ. ಸುಮಂತ್ ಆದೇಶ ಹೊರಡಿಸಿದ್ದಾರೆ.
ಸದರಿ ವಿವಾದಿತ ಸ್ಥಳದಲ್ಲಿ 5 ಮತ್ತು ಅದಕ್ಕಿಂತ ಹೆಚ್ಚಿನ ಜನರು ಗುಂಪು ಸೇರಬಾರದು. ಸಾರ್ವಜನಿಕರು ಯಾವುದೇ ಶಸ್ತ್ರಾಸ್ತ್ರ/ಮಾರಕಾಸ್ತ್ರ ಹಿಡಿದು ಓಡಾಡಲು ಮತ್ತು ಬಳಸಲು ಅವಕಾಶವಿರುವುದಿಲ್ಲ. ಯಾವುದೇ ಸಿಡಿಮದ್ದು, ಇತ್ಯಾದಿ ಸ್ಫೋಟಕಗಳನ್ನು ಬಳಸಬಾರದು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.