ಬಾಬಾ ಬುಡಾನ್ ದರ್ಗಾಕ್ಕೆ ಹಿಂದೂ ಅರ್ಚಕರ ನೇಮಕಕ್ಕೆ ಸರಕಾರ ಅಫಿಡವಿಟ್ ಸಲ್ಲಿಸಿರುವುದು ಖಂಡನೀಯ: ಸೈಯದ್ ಫಕ್ರುದ್ದೀನ್ ಶಾ ಖಾದ್ರಿ

ಚಿಕ್ಕಮಗಳೂರು : ರಾಜ್ಯ ಸರಕಾರ ಬಾಬಾ ಬುಡಾನ್ ದರ್ಗಾದಲ್ಲಿನ ಧಾರ್ಮಿಕ ಪರಂಪರೆ, ಸೂಫಿ ಸಂಸ್ಕೃತಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಕಡೆಗಣಿಸಿ, ಬಾಬಾಬುಡಾನ್ ದರ್ಗಾ ಮತ್ತು ಸಂಬಂಧಿತ ಮುಸ್ಲಿಮ್ ಸಂಸ್ಥೆಗಳಾದ ಚಿಲ್ಲಾ, ಸಮಾಧಿ ಹಾಗೂ ಖಬ್ರಸ್ಥಾನದಲ್ಲಿ ಹಿಂದೂ ಅರ್ಚಕರ ನೇಮಕಾತಿಗೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವುದು ಖಂಡನೀಯ. ಈ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಸರಕಾರ ಈ ಧೋರಣೆಯನ್ನು ಮುಂದುವರಿಸಿದರೆ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಸೈಯದ್ ಬುಡಾನ್ ಶಾ ಖಾದ್ರಿ ವಂಶಸ್ಥ ಸೈಯದ್ ಫಕ್ರದ್ದಿನ್ ಶಾಖಾದ್ರಿ (ಅಜ್ಜತ್ ಪಾಶಾ) ಎಚ್ಚರಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾ ಬುಡಾನ್ ದರ್ಗಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ 1949 ಕಾಯ್ದೆ ಪಾಲಿಸಬೇಕು. ಬಾಬಾಬುಡಾನ್ ದರ್ಗಾದಲ್ಲಿ ಯಥಾಸ್ಥಿತಿ ಕಾಪಾಡುವಂತೆ ದಾಖಲೆಗಳನ್ನುಸಲ್ಲಿಸಿದರೂ ರಾಜ್ಯ ಸರಕಾರ ಇದನ್ನು ಪರಿಗಣಿಸಿಲ್ಲ. ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವ ಝಮೀರ್ ಖಾನ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ಸಭೆ ಇತ್ತೀಚೆಗೆ ನಡೆದಿದ್ದು, ಸಭೆಯಲ್ಲಿ ಮುಸ್ಲಿಮ್ ಸಮುದಾಯದ ನಾಲ್ವರಿಗೆ ಮಾತ್ರ ಮಾತನಾಡಲು ಅವಕಾಶ ನೀಡಿದ್ದಾರೆ ಹಾಗೂ ಹಿಂದು ಸಂಘಟನೆಯಿಂದ ಏಳು ಮಂದಿಗೆ ಅವಕಾಶ ನೀಡಿದ್ದಾರೆ. ಇಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ದೂರಿದರು.
ಹಿಂದೂ ಸಂಘಟನೆ ಪರವಾಗಿ ಇಬ್ಬರು ಸ್ವಾಮೀಜಿ, ಸಿ.ಟಿ.ರವಿ ಸೇರಿ ಇನ್ನೂ ನಾಲ್ವರಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಸಿ.ಟಿ.ರವಿ ಅವರು ದರ್ಗಾವೇ ಬೇರೆ, ದತ್ತಪೀಠವೇ ಬೇರೆ, ದರ್ಗಾ ನಾಗೇನಹಳ್ಳಿಯಲ್ಲಿದೆ ಎಂದಿದ್ದಾರೆ. ಶಾಸಕಿ ನಯನಾ ಮೋಟಮ್ಮ ದರ್ಗಾದ ಸೂಫಿ ಪರಂಪರೆ ಬದಲು ದತ್ತ ಜಯಂತಿಯನ್ನು ಬೆಂಬಲಿಸುವ ನಿರ್ಧಾರ ತಗೆದುಕೊಂಡಿದ್ದಾರೆ. ನಾವೂ ದಾಖಲೆಗಳನ್ನು ನೀಡಿದರೂ ರಾಜ್ಯ ಸರಕಾರ ಅದನ್ನು ಪರಿಗಣಿಸದೇ ಹಿಂದೂ ಅರ್ಚಕರ ನೇಮಕಾತಿಗೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ ಎಂದರು.
ಹಿಂದಿನ ಬಿಜೆಪಿ ಸರಕಾರ ಕೋಮುಭಾವನೆ ಕೆರಳಿಸುವ ಕೆಲಸ ಮಾಡಿತ್ತು. ಇದರಿಂದ ಬೇಸತ್ತ ಮುಸ್ಲಿಮ್ ಸಮುದಾಯದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಾಬಾಬುಡಾನ್ ದರ್ಗಾ ವಿಚಾರದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಸರಕಾರದ ಈ ನಿಲುವು ಸರಿ ಕಾಣುತ್ತಿಲ್ಲ ಎಂದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ, ಬಾಬಾಬುಡಾನ್ ದರ್ಗಾದಲ್ಲಿ ಹಿಂದೂ ಪೂಜಾ ವಿಧಿವಿಧಾನಗಳು, ಹಿಂದೂ ಅರ್ಚಕರ ನೇಮಕಕ್ಕೆ ಮುಸ್ಲಿಮ್ ಸಮುದಾಯದ ವಿರೋಧವಿದೆ. ರಾಜ್ಯ ಸರಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಮುಸ್ಲಿಮ್ ಸಮುದಾಯದ ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಸರಕಾರ ಬಾಬಾಬುಡಾನ್ ದರ್ಗಾ ವಿಚಾರದಲ್ಲಿ ಮಾಡುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡುವ ಮೂಲಕ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತನ್ವಿರ್ ಅಹಮದ್ ಖಾದ್ರಿ, ಯೂಸೂಫ್ ಹಾಜಿ, ಮಸೂದ್ ಆಹ್ಮದ್, ಸೈಯದ್ ಸಕ್ಲೀನ್ ಪಾಶ ಉಪಸ್ಥಿತರಿದ್ದರು







