ಚಿಕ್ಕಮಗಳೂರು-ತಿರುಪತಿ ರೈಲು | ‘ಬಾಬಾ ಬುಡಾನ್ ಎಕ್ಸ್ಪ್ರೆಸ್’ ನಾಮಕರಣಕ್ಕೆ ಒತ್ತಾಯಿಸಿ ಕೇಂದ್ರಕ್ಕೆ ಪತ್ರ

ಸೈಯದ್ ಫಕ್ರುದ್ದೀನ್ ಶಾ ಖಾದ್ರಿ
ಚಿಕ್ಕಮಗಳೂರು : ತಿರುಪತಿ-ಚಿಕ್ಕಮಗಳೂರು ನಡುವೆ ಸಂಚರಿಸುವ ನೂತನ ರೈಲಿಗೆ ಬಾಬಾ ಬುಡಾನ್ ಎಕ್ಸ್ಪ್ರೆಸ್ ಹೆಸರು ನಾಮಕರಣ ಮಾಡಬೇಕೆಂದು ಸೈಯದ್ ಬಾಬಾ ಬುಡಾನ್ ಶಾಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಮುಖೇನ ಮನವಿ ಸಲ್ಲಿಸಿರುವ ಅವರು, ಸೈಯದ್ ಬಾಬಾ ಬುಡಾನ್ ಶಾಖಾದ್ರಿ 17ನೇ ಶತಮಾನದ ಸೂಫಿ ಧಾರ್ಮಿಕ ಪರಂಪರೆಯ ಸಂಕೇತವಾಗಿದ್ದಾರೆ. ಇಡೀ ದೇಶಕ್ಕೆ ಕಾಫಿಯನ್ನು ಪರಿಚಯಿಸುವ ಮೂಲಕ ಕಾಫಿ ಕೃಷಿ ಮೂಲಕ ಲಕ್ಷಾಂತರ ರೈತರ ಬದುಕಿಗೆ ಆಸರೆಯಾದವರಾಗಿದ್ದಾರೆ. ಈ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆ ಹಾಗೂ ಜಿಲ್ಲೆಯ ಏಕತೆ, ಸಾಮರಸ್ಯದ ಸಂಕೇತವಾಗಿದ್ದಾರೆ. ಕೇಂದ್ರ ಸರಕಾರ ಸೂಫಿ ಪರಂಪರೆಯ ಸಂತ ಹಾಗೂ ಭಾರತದ ಕಾಫಿ ಬೆಳೆಯ ಪಿತಾಮಹ ಆಗಿರುವ ಬಾಬಾ ಬುಡಾನ್ ಅವರ ಗೌರವಾರ್ಥ ಚಿಕ್ಕಮಗಳೂರು-ತಿರುಪತಿ ನಡುವೆ ಸಂಚರಿಸುವ ನೂತನ ರೈಲಿಗೆ ಬಾಬಾ ಬುಡಾನ್ ಎಕ್ಸ್ಪ್ರೆಸ್ ಹೆಸರನ್ನು ನಾಮಕರಣ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.





