ಚಿಕ್ಕಮಗಳೂರು | ಮಳೆಯೊಂದಿಗೆ ಭಾರೀ ಗಾಳಿ; ಅಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿ

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಭಾರೀ ಗಾಳಿ ಮತ್ತಷ್ಟು ಬಿರುಸುಗೊಂಡಿದೆ. ಭಾರೀ ಗಾಳಿಯಿಂದಾಗಿ ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದರೇ, ಶೃಂಗೇರಿ-ಮಂಗಳೂರು ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಭೂ ಕುಸಿತ ಉಂಟಾಗಿ ವಾಹನಗಳ ಸಂಚಾರ ಬಂದ್ ಆಗಿದೆ.
ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಹಾಗೂ ಗಾಳಿ ಅಬ್ಬರ ರವಿವಾರವೂ ಮುಂದುವರಿದಿದೆ. ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ ಭಾರೀ ಗಾಳಿಯಿಂದಾಗಿ ಎನ್.ಆರ್.ಪುರ ತಾಲೂಕಿನ ಆಡುವಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದ ಮನೆಯ ಮೇಲೆ ಅಕೇಶಿಯಾ ಮರ ಉರುಳಿ ಬಿದ್ದು, ಮನೆಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನ ಜಯಪುರ-ಕೊಪ್ಪ ಸಂಪರ್ಕದ ರಾಜ್ಯ ಹೆದ್ದಾರಿಯ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಕೆಲ ಹೊತ್ತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕಳಸ ತಾಲೂಕಿನ ಇಡಕಣಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಣಮ್ಮ ಎಂಬವರ ಮನೆ ಮೇಲೆ ಮರ ಬಿದ್ದು, ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶೃಂಗೇರಿ ತಾಲೂಕಿನಲ್ಲಿ ಶನಿವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಭಾರೀ ಮಳೆಯಿಂದಾಗಿ ತಾಲೂಕಿನ ನೆಮ್ಮಾರು ಗ್ರಾಮದ ಮೂಲಕ ಹಾದು ಹೋಗಿರುವ ಶೃಂಗೇರಿ-ಮಂಗಳೂರು ಹೆದ್ದಾರಿ ಮೇಲೆ ರಸ್ತೆ ಬದಿಯ ಧರೆ ಕುಸಿದು ರಸ್ತೆಯಲ್ಲಿ ವಾಹನ ಸಂಚಾರ ಸ್ತಬ್ಧಗೊಂಡಿತ್ತು. ಸ್ಥಳೀಯರು ಸಂಬಂಧಿಸಿದ ಇಲಾಖೆ ಸಿಬ್ಬಂದಿ ಮಣ್ಣು ತೆರವು ಮಾಡಿದ್ದು, ರವಿವಾರ ಸಂಜೆಯಿಂದ ವಾಹನ ಸಂಚಾರಕ್ಕೆ ಹೆದ್ದಾರಿ ಮುಕ್ತಗೊಂಡಿದೆ. ತಾಲೂಕಿನಾದ್ಯಂತ ಹರಿಯುವ ತುಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ತುಂಗಾ ನದಿಯ ನೆರೆ ನೀರು ಶೃಂಗೇರಿ ಪಟ್ಟಣದ ಗಾಂಧೀ ಮೈದಾನ ಆವರಿಸಿರುವುದಲ್ಲದೇ ನದಿ ತೀರದಲ್ಲಿರುವ ಪ್ಯಾರಲಲ್ ರಸ್ತೆವರೆಗೂ ನೆರೆ ನೀರು ಆವರಿಸಿದೆ.
ಮಲೆನಾಡು ಭಾಗದಲ್ಲಿ ರವಿವಾರ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ ಆಗಾಗ್ಗೆ ಭಾರೀ ಮಳೆ ಸುರಿದಿದೆ. ಭಾರೀ ಮಳೆಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚುತ್ತಿದೆ. ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದ್ದು, ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುವಂತಹ ಘಟನೆಗಳು ಸಾಮಾನ್ಯವಾಗಿವೆ.
ರವಿವಾರ ಚಿಕ್ಕಮಗಳೂರು, ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಸಾಧಾರಣ ಮಳೆಯಾಗಿದ್ದರೆ, ಉಳಿದಂತೆ ಇಡೀ ದಿನ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಗಾಳಿಯ ಆರ್ಭಟ ಮತ್ತುಷ್ಟು ಜೋರಾಗಿತ್ತು.







