ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್: ಶಾಸಕಿ ನಯನಾ ಆಕ್ರೋಶ

ಚಿಕ್ಕಮಗಳೂರು, ಜ.12: ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಹಾಕುವವರ ವಿರುದ್ಧ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಯನಾ ಮೋಟಮ್ಮ ಅವರು ರಾಜಕೀಯ ಮತ್ತು ವೈಯಕ್ತಿಕ ವಿಚಾರಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯೇಕ ಎರಡು ಖಾತೆಗಳನ್ನು ತೆರೆದಿದ್ದು, ಪ್ರವಾಸ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡಿರುವ ಖಾತೆಯಲ್ಲಿ ಕಿಡಿಗೇಡಿಗಳು ಅವರ ಬಟ್ಟೆಯ ವಿಚಾರವಾಗಿ ಅಸಭ್ಯ ಸಂದೇಶಗಳನ್ನು ರವಾನಿಸಿದ್ದಾರೆ.
ಈ ವಿಚಾರವಾಗಿ ಆಕ್ರೋಶಭರಿತರಾಗಿರುವ ಶಾಸಕಿ ನಯನಾ ಮೋಟಮ್ಮ ಅವರು, ಡ್ರೆಸ್, ಪ್ಯಾಂಟ್, ಜೀನ್ಸ್ ಅಥವಾ ಸ್ಲೀವ್‌ಲೆಸ್ ಬಟ್ಟೆಗಳನ್ನು ಧರಿಸಿದಾಗ ಕೆಲಸ ಮಾಡದ ರಾಜಕಾರಣ, ರಸ್ತೆಗಳ ಗುಂಡಿ ಮುಚ್ಚದ ಶಾಸಕರು, ತೆರಿಗೆದಾರರ ಹಣದಲ್ಲಿ ಬದುಕುವವರು ಎಂದು ಟೀಕಿಸಲಾಗುತ್ತಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಪುರುಷ ರಾಜಕಾರಣಿಗಳ ಉಡುಪಿನ ಬಗ್ಗೆ ಯಾರೂ ಎಂದಿಗೂ ಪ್ರಶ್ನೆ ಮಾಡುವುದಿಲ್ಲ. ಆದರೆ ಮಹಿಳೆಯರ ವಿಚಾರದಲ್ಲಿ ಇಂತಹ ಮನೋಭಾವವೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಕಾಮೆಂಟ್ ಮಾಡುವವರಲ್ಲಿ ಹೆಚ್ಚಿನವರು ಡಿಪಿ ಇಲ್ಲದ ಹಾಗೂ ಫೇಕ್ ಪ್ರೊಫೈಲ್‌ಗಳನ್ನು ಹೊಂದಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
2025ರಲ್ಲಿಯೂ ನಯನಾ ಮೋಟಮ್ಮ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಆರೋಪದ ಮೇರೆಗೆ ರಾಮನಗರ ಜಿಲ್ಲೆ ಮೂಲದ ಯಕ್ಷಿತ್ ರಾಜ್ ಎಂಬಾತನನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದರು.
ಸೋಮವಾರ ಈ ಸಂಬಂಧ ಸುದ್ದಿಗಾರರೊಂದಿಗೆ ನಯನಾ ಮೋಟಮ್ಮ ಮಾತನಾಡಿ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಖಾತೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಖಾತೆಯನ್ನು ಹೊಂದಿದ್ದು, ವೈಯಕ್ತಿಕ ವಿಚಾರ ಖಾತೆಯನ್ನು ಯಾವುದೇ ಸೆಕ್ಯೂರಿಟಿ ಇಟ್ಟುಕೊಳ್ಳದೆ ಪಬ್ಲಿಕ್ ಆಗಿ ಇಟ್ಟುಕೊಂಡಿದ್ದೇನೆ. ರಾಜಕೀಯ ಪ್ರವೇಶಕ್ಕೂ ಮುಂಚೆ ಹೇಗಿದ್ದೆನೋ ಅದೇ ರೀತಿಯಾಗಿ ಇರಲು ಪ್ರಯತ್ನಿಸುತ್ತಿದ್ದೇನೆ ಎಂದರು.
ನಿಮ್ಮ ಜನಪ್ರತಿನಿಧಿಗಳು ಯಾವ ರೀತಿ ಇರಬೇಕು ಎಂದು ಯುವ ಪೀಳಿಗೆ ನಿರ್ಧಾರ ಮಾಡಬೇಕು. ಎಲ್ಲದಕ್ಕೂ ಚೌಕಟ್ಟು ಹಾಕಿದರೆ ಹೇಗೆ? ಜನಪ್ರತಿನಿಧಿಗಳಿಗೂ ವೈಯಕ್ತಿಕ ಜೀವನ ಇಲ್ಲವೇ? ಮಹಿಳೆಯರು ರಾಜಕಾರಣಕ್ಕೆ ಬರುವುದು ಕಡಿಮೆ ಇದೆ. ಅದರಲ್ಲೂ ರಾಜಕಾರಣಕ್ಕೆ ಬಂದ ಮಹಿಳೆಯರ ಬಗ್ಗೆ ಹೀಗೆ ಕಾಮೆಂಟ್ ಮಾಡಿದರೆ ಹೇಗೆ? ಚಲನಚಿತ್ರ ನಟಿಯರಿಗೂ ಈ ರೀತಿಯಾಗುತ್ತಿತ್ತು.
ಈಗ ಮಹಿಳಾ ರಾಜಕಾರಣಿಯನ್ನು ಟಾರ್ಗೆಟ್ ಮಾಡಿದ್ದೀರಾ. ಅಸಭ್ಯವಾದ ಪದ ಬಳಕೆಯಿಂದ ಅವರ ಮನಸ್ಸಿನ ಮೇಲೆ ಏನು ಪ್ರಭಾವ ಬೀರಬಹುದು ಯೋಚಿಸಬೇಕಲ್ಲವೇ? ಎಂದ ಅವರು, ರಾಜಕಾರಣಿಗಳ ಪರ ಹಾಗೂ ವಿಶೇಷವಾಗಿ ಮಹಿಳೆಯರ ಪರವಾಗಿ ನಾನು ಧ್ವನಿ ಎತ್ತುತ್ತಿದ್ದೇನೆ ಎಂದು ಹೇಳಿದರು.







