ಚಿಕ್ಕಮಗಳೂರು | ಕಾಡಾನೆ ದಾಳಿ: ಕಾರ್ಮಿಕನಿಗೆ ಗಾಯ

ಚಿಕ್ಕಮಗಳೂರು: ಕಾಫಿ ತೋಟದ ಕೆಲಸದಿಂದ ಹಿಂತಿರುಗುತ್ತಿದ್ದಾಗ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಮಂಗಳವಾರ ಮೂಡಿಗೆರೆ ತಾಲೂಕಿನಲ್ಲಿ ವರದಿಯಾಗಿದೆ.
ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಘಟನೆ ನಡೆದಿದ್ದು, ಕಾಡಾನೆ ದಾಳಿಯಿಂದ ಕಾರ್ಮಿಕ ದಿನೇಶ್ (37) ತೀವ್ರವಾಗಿ ಗಾಯಗೊಂಡಿದ್ದಾರೆ.
ಬೈದುವಳ್ಳಿ ಗ್ರಾಮದ ಮೂರ್ತೇಶ್ ಎಂಬವರ ತೋಟಕ್ಕೆ ಕೆಲಸಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದ್ದು, ಮೂಡಿಗೆರೆ ಸಮೀಪದ ಹೆಸಗಲ್ ಗ್ರಾಮದ ದಿನೇಶ್ ಹಾಗೂ ಇತರರು ತೋಟದ ಕೆಲಸಕ್ಕೆ ಆಗಮಿಸಿದ್ದರು. ತೋಟದ ಕೆಲಸ ಮುಗಿಸಿ ನಡೆದುಕೊಂಡು ಬರುತ್ತಿದ್ದಾಗ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಹಿಂಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ದಿನೇಶ್ ಅವರನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ನಂತರ ಕೆಲ ಹೊತ್ತು ಅಲ್ಲಿಯೇ ನಿಂತು ಹಿಂದಿರುಗಿದೆ.
ಕಾಡಾನೆ ಎತ್ತಿ ಎಸೆದ ರಭಸಕ್ಕೆ ದಿನೇಶ್ ಅವರ ಬೆನ್ನು, ಕುತ್ತಿಗೆ ಮತ್ತು ತಲೆ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಈ ಸಂದರ್ಭದಲ್ಲಿ ತೋಟದ ಮಾಲಕ ಮೂರ್ತೇಶ್ ಮತ್ತು ಇತರ ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಗಾಯಗೊಂಡ ದಿನೇಶ್ ಅವರನ್ನು ತಕ್ಷಣ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿಗೆ ಕರೆದೊಯ್ಯಲಾಗಿದೆ. ದಿನೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಮೂಡಿಗೆರೆ ಆರ್.ಎಫ್.ಓ. ಕಾವ್ಯ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ ಮತ್ತು ಗಾಯಾಳುವಿನ ಚಿಕಿತ್ಸೆಗೆ ಸ್ಪಂದಿಸಿದ್ದಾರೆ. ಬೈದುವಳ್ಳಿ, ಮೂಲರಹಳ್ಳಿ, ಗುತ್ತಿಹಳ್ಳಿ, ಕುಂಬರಡಿ ಮುಂತಾದ ಗ್ರಾಮಗಳಲ್ಲಿ ಕಾಡಾನೆಯೊಂದು ಕಳೆದ ಕೆಲವು ದಿನಗಳಿಂದ ಹಗಲು ರಾತ್ರಿಯೆನ್ನದೇ ಸಂಚರಿಸುತ್ತಿವೆ. ಇದರಿಂದ ಈ ಭಾಗದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಜೀವಹಾನಿ ಆಗುವ ಮೊದಲು ಈ ಕಾಡಾನೆಯನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.