10 ವರ್ಷಗಳಿಂದ ನೆಮ್ಮದಿ ಕಳೆದುಕೊಂಡ ಜನರು ತಕ್ಕ ಉತ್ತರ ನೀಡಲು ಸಿದ್ಧರಾಗಿದ್ದಾರೆ: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ
ಮೂಡಿಗೆರೆ: ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದ್ದೇವೆ ಎಂದು ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಚುನಾವಣೆ ಬಾಂಡ್ ಹಗರಣದಿಂದ ಇವರ ಭ್ರಷ್ಟಾಚಾರ ಸುಪ್ರೀಂಕೋರ್ಟ್ ಬಯಲಿಗೆಳೆದಿರುವುದು ದೇಶಕ್ಕೆ ತಿಳಿದಿದೆ. ಬಿಜೆಪಿ ಆಡಳಿತದಿಂದ ಸಂಕಷ್ಟ ಎದುರಿಸುತ್ತಿರುವ ಸಾರ್ವಜನಿಕರು ಈ ಬಾರಿ ಮೋದಿ ಸರಕಾರಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಾಗಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ತಾಲೂಕಿನ ಬಣಕಲ್, ಕಸಬಾ, ಗೋಣಿಬೀಡು, ಬಾಳೂರು ಹೋಬಳಿ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಾನು ಸಂಸದನಾಗಿದ್ದಾಗ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಅನುಮೋದನೆಯಾಗಿತ್ತು. ಆದರೆ 10 ವರ್ಷ ಕಳೆದರೂ ರಸ್ತೆ ಅಗಲೀಕರಣ ಮಾಡಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ. ಅಲ್ಲದೇ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಮಂತ್ರಿ ಕೂಡ ಆಗಿದ್ದರು. ಆದರೆ ಇಲ್ಲಿನ ಕಾಫಿ ಬೆಳಗಾರರ ಸಮಸ್ಯೆ, ಅಡಕೆ ರೋಗ ನಿವಾರಣೆ ಸೇರಿದಂತೆ ರೈತರ ಹಾಗೂ ಜನರ ಸಮಸ್ಯೆ ನಿವಾರಿಸಲಿಲ್ಲ. ಪೆಟ್ರೋಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ನೆಮ್ಮದಿಯಿಂದ ಬದುಕದಂತೆ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಹಾಗೂ ಜನಪರ ಯೋಜನೆ ರೂಪಿಸದೇ ಕೇವಲ ಮೋದಿ ಹೆಸರೇಳಿಕೊಂಡು ಪುನಃ ಮತ ಕೇಳಿದರೆ ಜನ ಬೆಂಬಲಿಸುತ್ತಾರೆಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆಂದು ದೂರಿದರು.
ಬಿಜಪಿ ಅಧಿಕಾರಕ್ಕೆ ಬರುವ ಮುನ್ನ ಕಪ್ಪು ಹಣ ತಂದು ಎಲ್ಲರ ಅಕೌಂಟ್‍ಗೆ 15 ಲಕ್ಷ ಹಾಕುತ್ತೇವೆಂದು ಇದೂವರೆಗೂ ಹಾಕಿಲ್ಲ. ಆ ಕಪ್ಪು ಹಣ ಕಪ್ಪಾಗಿಯೇ ಉಳಿದಿದೆ. ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಮಾತನಾಡುವವರು ಚುನಾವಣೆ ಬಾಂಡ್ ಹಗರಣದಿಂದ ಇವರ ಭ್ರಷ್ಟಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಬಯಲಿಗೆಳಿದಿದೆ. ಉಜ್ವಲ ಯೋಜನೆಯಲ್ಲಿ ಉಚಿತ ಗ್ಯಾಸ್ ಯಾರಿಗೂ ಬರುತ್ತಿಲ್ಲ. ರಾಜ್ಯ ಸರಕಾರ 5 ಗ್ಯಾರಂಟಿ ನೀಡಿದಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕೂಡ 5 ಗ್ಯಾರಂಟಿ ಘೋಷಿಸಿದೆ. ಇದರಿಂದ ಜನರ ಸಂಕಷ್ಟ ಇನ್ನಷ್ಟು ನಿವಾರಣೆಯಾಗುತ್ತದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. .
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ರಾಜ್ಯ ಸರಕಾರ ನೀಡಿರುವ 5 ಗ್ಯಾರಂಟಿಯಿಂದ ಜನರಿಗೆ ಅನುಕೂಲವಾಗಿದೆ. ಅಲ್ಲದೇ ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಹಿಂದೆ 20 ತಿಂಗಳು ಸಂಸದರಾಗಿದ್ದಾಗ ಅನೇಕ ಜನಪರ ಕೆಲಸ ಮಾಡಿದ್ದಾರೆ. ಇದರಿಂದ ನಾವು ಜನರ ಬಳಿ ತೆರಳಿ ಮತ ಕೇಳುವ ಧೈರ್ಯ ನಮಗಿದೆ. ಆದರೆ ಕಳೆದ 10 ವರ್ಷದಲ್ಲಿ ಕೇಂದ್ರದ ಬಿಜೆಪಿ ಸರಕಾರದ ದುರಾಡಳಿತ ಹಾಗೂ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರ ಅಭಿವೃದ್ಧಿ ಕಾರ್ಯ ಶೂನ್ಯವೆಂದು ಅವರದೇ ಪಕ್ಷದವರು ಗೋ ಬ್ಯಾಕ್ ಶೋಭಾ ಎಂದು ಇಲ್ಲಿಂದ ಓಡಿಸಿದ್ದಾರೆ. ಇದರಿಂದ ಬಿಜೆಪಿಯವರಿಗೆ ಜನರ ಬಳಿ ಹೋಗಿ ಮತ ಕೇಳಲು ಅಂಜಿಕೆ ಉಂಟಾಗಿದೆ. ಈಗಾಗಲೇ ಜನರು ಬದಲಾವಣೆ ಬಯಸಿದ್ದಾರೆ. ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗಬೇಕಿದೆ. ಅದಕ್ಕಾಗಿ ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ಸಂಸತ್‍ಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಪ.ಪಂ. ಸದಸ್ಯ ಕೆ.ವೆಂಕಟೇಶ್, ಸಿ.ಬಿ.ಶಂಕರ್, ಸಿ.ಕೆ.ಇಬ್ರಾಹಿಂ ಮತ್ತಿತರರಿದ್ದರು.