ಕೊಪ್ಪ: ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಪ್ರಾಂಶುಪಾಲೆ, ವಾರ್ಡನ್ ಅಮಾನತು
ನ್ಯಾಯಾಂಗ ತನಿಖೆಗೆ ಆದೇಶ

ಚಿಕ್ಕಮಗಳೂರು: ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವ ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಸರಕಾರ ಆದೇಶಿಸಿದ್ದ ಬೆನ್ನಲ್ಲೇ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್‍ರನ್ನು ಅಮಾನತುಗೊಳಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್.ಕಾಂತರಾಜ್ ಬುಧವಾರ ಈ ಆದೇಶ ಹೊರಡಿಸಿದ್ದಾರೆ.
ಜೂ.28ರಂದು ಕೊಪ್ಪ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಶಮಿತಾ(15) ಸ್ನಾನ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಾಲಕಿ ಪೋಷಕರು ಈ ಪ್ರಕರಣದ ಬಗ್ಗೆ ಶಂಕೆ ವ್ಯಕ್ತಪಡಿಸಿ ಶಾಲೆಯ ಸಿಬ್ಬಂದಿಯ ದೌರ್ಜನ್ಯದಿಂದಲೇ ಶಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪಿಸಿ, 2023ರಲ್ಲೂ ಇದೇ ರೀತಿಯಲ್ಲಿ ಅಮೂಲ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಈ ಪ್ರಕರಣವನ್ನೂ ಮುಚ್ಚಿ ಹಾಕಲಾಗಿದೆ ಎಂದು ದೂರಿದ್ದರು.
ಆರೋಪದ ಹಿನ್ನೆಲೆಯಲ್ಲಿ ಪ್ರಗತಿಪರ, ಕನ್ನಡಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಸೋಮವಾರ ಸಾವಿರಾರು ಜನರು ಕೊಪ್ಪ ಪಟ್ಟಣದಲ್ಲಿ ಬೃಹತ್ ಧರಣಿ ನಡೆಸಿ ಶಮಿತಾ ಹಾಗೂ ಅಮೂಲ್ಯ ಆತ್ಮಹತ್ಯೆ ಪ್ರಕರಣಗಳ ನ್ಯಾಯಾಂಗ ತನಿಖೆಯೊಂದಿಗೆ ಪ್ರಾಂಶುಪಾಲರು, ವಾರ್ಡನ್ ಹಾಗೂ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.
ಬುಧವಾರ ಬೆಳಗ್ಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ಎಸ್.ಕಾಂತರಾಜು ಅವರು, ಶಮಿತಾ ಮತ್ತು ಅಮೂಲ್ಯಳ ಆತ್ಮಹತ್ಯೆ ಪ್ರಕರಣಗಳನ್ನು ಜಿಲ್ಲಾ ಮಟ್ಟದ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಲು ಆದೇಶಿಸಿದ್ದು, ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶೆ ಶೋಭಾ ಅವರನ್ನು ತನಿಖೆಗಾಗಿ ನೇಮಿಸಿ ಆದೇಶಿಸಲಾಗಿದೆ.
ನ್ಯಾಯಾಂಗ ತನಿಖೆಯ ಆದೇಶದ ಬೆನ್ನಲ್ಲೇ ಬುಧವಾರ ಸಂಜೆ ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ರಂಜಿನಿ ಹಾಗೂ ನಿಲಯಪಾಲಕ ಸುಂದರ್ ನಾಯ್ಕ್ ಅವರನ್ನು ಅಮಾನತು ಮಾಡಿ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೊಪ್ಪ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಹಾಗೂ ಈ ಹಿಂದೆ ನಡೆದ ವಿದ್ಯಾರ್ಥಿನಿ ಅಮೂಲ್ಯಾಳ ಆತ್ಮಹತ್ಯೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಕೊಪ್ಪ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ಮೂಲಕ ರಾಜ್ಯ ಸರಕಾರವನ್ನು ಆಗ್ರಹಿಸಲಾಗಿತ್ತು. ಈ ಸಂಬಂಧ ಶಾಸಕರು ಅಗತ್ಯ ಕ್ರಮವಹಿಸುವ ಭರವಸೆ ನೀಡಿದ್ದರು. ಬುಧವಾರ ಈ ಸಂಬಂಧ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರು ನ್ಯಾಯಾಂಗ ತನಿಖೆಯೊಂದಿಗೆ ವಸತಿ ಶಾಲೆಯ ಪ್ರಾಂಶುಪಾಲೆ ಹಾಗೂ ವಾರ್ಡನ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳ ಹಿಂದೆ ಹಲವಾರು ಅನುಮಾನಗಳು ಎದ್ದಿವೆ. ಈ ಬಗ್ಗೆ ಸತ್ಯ ಹೊರ ಬರಬೇಕು, ಇದಕ್ಕಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಸರಕಾರ ಮತ್ತು ಈ ನಿಟ್ಟಿನಲ್ಲಿ ತುರ್ತಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಶಾಸಕ ರಾಜೇಗೌಡ ಅವರಿಗೆ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಕರಣ ತನಿಖೆಯಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು, ನೊಂದ ಕುಟುಂಬಗಳಿಗೆ ನ್ಯಾಯ ಮತ್ತು ಪರಿಹಾರ ಸಿಗಬೇಕು.
- ಕೆ.ಎಲ್.ಅಶೋಕ್







