ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರಿದ ಮಳೆ ಆರ್ಭಟ: ಮೂಡಿಗೆರೆ-ಬೈದುವಳ್ಳಿ ಸಂಪರ್ಕ ಕಡಿತ
ತೋಟಗಳಿಗೆ ನುಗ್ಗಿದ ನೀರು; ಐದು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ನಾಳೆ(ಜೂ.27) ರಜೆ ಘೋಷಣೆ

ಚಿಕ್ಕಮಗಳೂರು : ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಗುರುವಾರವೂ ಮಳೆ ಅಬ್ಬರಿಸಿದೆ. ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನಾದ್ಯಂತ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೇಮಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.
ತಾಲೂಕಿನಲ್ಲಿ ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಭಾರೀ ಮಳೆಯಾದ ಪರಿಣಾಮ ಮೂಡಿಗೆರೆ-ಬೈದುವಳ್ಳಿ ಸಂಪರ್ಕದ ಸೇತುವೆ ಹಳ್ಳದ ನೀರಿನಲ್ಲಿ ಮುಳುಗಡೆಯಾಗಿ, ಸಂಪರ್ಕ ಕಡಿತಗೊಂಡಿದೆ. ಇನ್ನು ಕೊಪ್ಪ ತಾಲೂಕಿನ ಹೊತ್ತಿನಗದ್ದೆ ಎಂಬಲ್ಲಿ ಭೂಕುಸಿತ ಸಂಭವಿಸಿದೆ.
ಮಲೆನಾಡು ಭಾಗದಲ್ಲಿ ಮುಂಗಾರುಮಳೆ ಮತ್ತಷ್ಟು ಚುರುಕುಗೊಂಡಿದೆ. ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಾದ್ಯಂತ ಗುರುವಾರ ಮಳೆಯ ಆರ್ಭಟ ಜೋರಾಗಿತ್ತು. ಭಾರೀ ಮಳೆಯ ಹಿನ್ನೆಲೆಯಲ್ಲಿ ಈ ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು.
ಮೂಡಿಗೆರೆ ತಾಲೂಕಿನಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಭಾರೀ ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ತಾಲೂಕಿನಲ್ಲಿ ಹರಿಯುವ ಹೇಮಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ಕಾಫಿ, ಅಡಿಕೆ ತೋಟ, ಹೊಲಗದ್ದೆಗಳಿಗೆ ನದಿಯ ನೆರೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಹೆಸಗೋಡು ಗ್ರಾಮದಲ್ಲೂ ಹೇಮಾವತಿ ನದಿ ನೀರು ಕಾಫಿ ತೋಟಗಳಿಗೆ ನುಗ್ಗಿ ಜಲಾವೃತಗೊಂಡಿದೆ. ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮೂಡಿಗೆರೆ-ಬೈದುವಳ್ಳಿ ಸಂಪರ್ಕದ ಕಿರು ಸೇತುವೆ ಹಳ್ಳದ ನೀರಿನಲ್ಲಿ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರು ಹರಿದ ಪರಿಣಾಮ ಜನ, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ತಾಲೂಕಿನ ಕೆಸವಳಲು ಗ್ರಾಮದಲ್ಲಿ ಕೂಡಿಗೆ ಸಂಗಮ ಎಂಬ ಧಾರ್ಮಿಕ ಸ್ಥಳವೂ ಜಲಾವೃತಗೊಂಡಿದೆ. ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ನಿರಂತರ ಮಳೆ ಮುಂದುವರಿದಿದ್ದು, ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ.
ಕೊಪ್ಪ ತಾಲೂಕಿನಲ್ಲೂ ಗುರುವಾರ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಹೊತ್ತಿನಗದ್ದೆ ಗ್ರಾಮದಲ್ಲಿ ನಿವಾಸಿಗಳು ವಾಸವಾಗಿರುವ ಮನೆಗಳ ಬದಿಯಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಧರೆಯ ಮಣ್ಣು ಮನೆಗಳ ಮೇಲೆ ಬಿದ್ದಲ್ಲಿ ಮನೆಗಳೂ ಮಣ್ಣಿನೊಂದಿಗೆ ಕೊಚ್ಚಿ ಹೋಗುವ ಆತಂಕದಲ್ಲಿ ನಿವಾಸಿಗಳು ಬದುಕುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಬಗ್ಗೆ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಕಳಸ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಮಳೆ ಆರ್ಭಟಿಸಿದ್ದು, ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳಿಗೂ ಹಾನಿ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಭದ್ರಾ, ತುಂಗಾ ನದಿಗಳೂ ಕೂಡ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿವೆ.
ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ: ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಕಳಸ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶುಕ್ರವಾರವೂ ರಜೆ ಘೋಷಣೆ ಮಾಡಿ ಜಿಲ್ಲಾಡಳಿತ ಆದೇಶಿಸಿದೆ.