ಸರ್ಫೇಸಿ ಕಾಯ್ದೆ ರದ್ದತಿಗೆ ಪಕ್ಷಾತೀತವಾಗಿ ಧ್ವನಿ ಎತ್ತಿ: ರಾಜಕೀಯ ಪಕ್ಷಗಳಿಗೆ ದೇವರಾಜ್ ಸಲಹೆ

ಚಿಕ್ಕಮಗಳೂರು: ಕಾಫಿ ಬೆಳೆಗಾರರ ಪಾಲಿಗೆ ಮರಣಶಾಸನವಾಗಿರುವ ಸರ್ಫೇಸಿ ಕಾಯ್ದೆ ರದ್ದತಿಗೆ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಒತ್ತಾಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಕಾಂಗ್ರೆಸ್, ಜೆಡಿಎಸ್, ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ರೈತಸಂಘ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಫೇಸಿ ಕಾಯ್ದೆಯಡಿ ಇದುವರೆಗೆ 3 ಸಾವಿರಕ್ಕೂ ಹೆಚ್ಚು ಕಾಫಿ ಬೆಳೆಗಾರರ ಕಾಫಿ ತೋಟಗಳನ್ನು ಹರಾಜು ಹಾಕಲಾಗಿದ್ದು, ಜಿಲ್ಲೆಯಲ್ಲೂ ಅನೇಕ ತೋಟಗಳನ್ನು ಆನ್‌ಲೈನ್ ಮೂಲಕ ಹರಾಜು ಹಾಕಲಾಗುತ್ತಿದೆ. ಇದರಿಂದಾಗಿ ಕಾಫಿ ಬೆಳೆಗಾರರು ದಯಾಮರಣ ಕೋರುತ್ತಾ ಆತ್ಮಹತ್ಯೆಯ ಹಾದಿ ತುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರು ಕಾಫಿ ಬೆಳೆಯನ್ನು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಸುಮಾರು 3 ಸಾವಿರ ಕಾಫಿ ತೋಟಗಳನ್ನು ಸಾಲ ಮರುಪಾವತಿ ಮಾಡಿಲ್ಲ ಎಂಬ ನೆಪವೊಡ್ಡಿ ಬ್ಯಾಂಕ್‌ಗಳು ಆನ್‌ಲೈನ್ ಹರಾಜು ಹಾಕಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಅನೇಕ ತೋಟಗಳನ್ನು ಹರಾಜು ಹಾಕಲಾಗಿದ್ದು, ಇನ್ನೂ ಹಲವಾರು ತೋಟಗಳನ್ನು ಹರಾಜು ಹಾಕಲು ಬ್ಯಾಂಕ್‌ಗಳು ಸಿದ್ಧತೆ ನಡೆಸಿವೆ. ಇದರಿಂದಾಗಿ ಬೇಸತ್ತ ಕಾಫಿ ಬೆಳೆಗಾರರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯುತ್ತಿದ್ದಾರೆ. ಇದು ಅಘಾತಕಾರಿ ಬೆಳವಣಿಗೆಯಾಗಿದ್ದು, ಕೇಂದ್ರ ಸರಕಾರ ಕೂಡಲೇ ಸರ್ಫೇಸಿ ಕಾಯ್ದೆಯ ರದ್ದತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
‘ಮುಂದಿನ 6ತಿಂಗಳುಗಳಲ್ಲಿ ಕೇಂದ್ರ ಸರಕಾರ ಸರ್ಫೇಸಿ ಕಾಯ್ದೆ ವ್ಯಾಪ್ತಿಯಿಂದ ಕಾಫಿ ಬೆಳೆಯನ್ನು ಹೊರಗಿಡಲು ಕಾಯ್ದೆಗೆ ತಿದ್ದುಪಡಿ ತರಲಿದೆ. ಈ ಸಂಬಂಧ ಕೇಂದ್ರ ವಾಣಿಜ್ಯ ಹಾಗೂ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರೇ ಖುದ್ದು ಭರವಸೆ ನೀಡಿದ್ದಾರೆ. ಬ್ಯಾಂಕ್‌ಗಳು ಕಾಫಿ ಬೆಳೆಗಾರರ ತೋಟಗಳ ಹರಾಜು ಹಾಕದಂತೆ ಕೇಂದ್ರ ಸರಕಾರ ಬ್ಯಾಂಕ್‌ಗಳಿಗೆ ಸೂಚಿಸಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದರು. ಆದರೆ, ವರ್ಷ ಕಳೆದರೂ ಕೇಂದ್ರ ಸರಕಾರ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣ ನೀಡಿ ಬ್ಯಾಂಕ್‌ಗಳು ಕಾಫಿ ತೋಟಗಳ ಇ-ಹರಾಜಿಗೆ ಮುಂದಾಗಿವೆ. ಇದರಿಂದ ಕಾಫಿ ಬೆಳೆಗಾರರು ಆತಂಕಕ್ಕೀಡಾಗಿ ಆತ್ಮಹತ್ಯೆಯ ಚಿಂತನೆ ನಡೆಸಿದ್ದಾರೆ. ಆದರೆ, ಬಿಜೆಪಿ ಸಂಸದರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಬಿಜೆಪಿ ಸಂಸದರಿಗೆ ಕಾಫಿ ಬೆಳೆಗಾರರು ಮತ್ತು ಕಾಫಿ ಉದ್ಯಮದ ಮೇಲೆ ಕಿಂಚಿತ್ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಂದೂರು ವ್ಯಾಪ್ತಿಯ ಬ್ಯಾಂಕ್‌ವೊಂದರಲ್ಲಿ ಸಾಲ ಮಾಡಿದ್ದ ಕಾಫಿ ಬೆಳೆಗಾರರ ತೋಟವನ್ನು ಹರಾಜಿಗೆ ಬ್ಯಾಂಕ್ ಮುಂದಾಗಿದ್ದು, ಬೆಳೆಗಾರರು ಹರಾಜಿನ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ಆದರೆ, ಬ್ಯಾಂಕ್‌ನವರು ನ್ಯಾಯಾಲಯದ ತಡೆಯಾಜ್ಞೆಗೂ ಬೆಲೆ ನೀಡದೆ ತೋಟ ಹರಾಜಿಗೆ ಮುಂದಾಗಿದ್ದಾರೆ. ಈ ವಿಚಾರದಲ್ಲಿ ಬ್ಯಾಂಕ್ ಅಧಿಕಾರಿಗಳು ಆತುರದ ನಿರ್ಣಯ ಕೈಗೊಳ್ಳುತ್ತಿದ್ದು, ಇದರ ಹಿಂದೆ ಕಪ್ಪುಹಣದ ಮಾಲಕರು, ರಿಯಲ್ ಎಸ್ಟೇಟ್ ಉದ್ಯಮದರ ಹುನ್ನಾರ ಎದ್ದು ಕಾಣುತ್ತಿದೆ. ಕಾಫಿ ಉದ್ಯಮ ರಿಯಲ್ ಎಸ್ಟೇಟ್‌ನವರ ಕೈಗೆ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ಮುಖಂಡ ಕೆ.ಗುರುಶಾಂತಪ್ಪ ಮಾತನಾಡಿ, ಕಾಫಿ ಮಂಡಳಿಯ ಅಧ್ಯಕ್ಷರು ಬಿಜೆಪಿಯ ನಾಯಕರಾಗಿದ್ದರೂ ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದ ಅನುಭವಿಸುತ್ತಿರುವ ಸಂಕಷ್ಟವನ್ನು ಕೇಂದ್ರಕ್ಕೆ ಮನವರಿಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಸಿಪಿಐ ನಾಯಕಿ ರಾಧಾ ಸುಂದರೇಶ್ ಮಾತನಾಡಿ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲೂ ಕಾಫಿಯನ್ನು ಬೆಳೆಯಲಾಗುತ್ತಿದೆ. ಆದರೆ, ಆ ರಾಜ್ಯಗಳಲ್ಲಿ ಸರ್ಫೇಸಿ ಕಾಯ್ದೆಯೇ ಜಾರಿಯಲ್ಲಿಲ್ಲ. ಆದರೆ, ಕರ್ನಾಟಕ ರಾಜ್ಯದಲ್ಲಿ ಮಾತ್ರ ಸರ್ಫೇಸಿ ಕಾಯ್ದೆಯಡಿಯಲ್ಲಿ ಕಾಫಿ ಬೆಳೆಯನ್ನು ಸೇರಿಸಿ ಕಾಫಿ ಬೆಳೆಗಾರರ ತೋಟಗಳನ್ನು ಹರಾಜು ಹಾಕಲಾಗುತ್ತಿದೆ. ಕಾಫಿ ಬೆಳೆಯುವ ಜಿಲ್ಲೆಗಳ ವ್ಯಾಪ್ತಿಯ ಸಂಸದರೂ ಇನ್ನಾದರೂ ಸಂತ್ರಸ್ತ ಕಾಫಿ ಬೆಳೆಗಾರರ ನೆರವಿಗೆ ಮುಂದಾಗಬೇಕೆಂದು ಕೋರಿದರು.
ಜೆಡಿಎಸ್ ಮುಖಂಡ ಮಂಜಪ್ಪ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಮತ್ತಿತರರು ಮಾತನಾಡಿ, ಲೋಕಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸುಳ್ಳು ಹೇಳಿದ್ದಾರೋ ಅಥವಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಸರ್ಫೇಸಿ ಕಾಯ್ದೆಯಡಿ ಸುಳ್ಳು ಹೇಳಿದ್ದಾರೋ ಎಂಬುದನ್ನು ಸ್ಪಷ್ಟ ಪಡಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಡಿ.ಮಹೇಶ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
ಕಾಫಿ ಉದ್ಯಮ ಮತ್ತು ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಬೆಳೆಗಾರರ ಸಂಕಷ್ಟಕ್ಕೆ ಧ್ವನಿಯಾಗಬೇಕು. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಸರ್ಫೇಸಿ ಕಾಯ್ದೆಯನ್ನೇ ರದ್ದು ಮಾಡುವಂತೆ ಒತ್ತಾಯಿಸಬೇಕು.
ಎಚ್.ಎಚ್.ದೇವರಾಜ್, ಕೆಪಿಸಿಸಿ ವಕ್ತಾರ