ಮೋದಿ ಸರಕಾರ ʼಎಸ್‍ಐಆರ್ʼ ಮೂಲಕ ಸಂವಿಧಾನವನ್ನು ಸಾಯಿಸಲು ಮುಂದಾಗಿದೆ : ಶಿವಸುಂದರ್

ಚಿಕ್ಕಮಗಳೂರು : ಕೇಂದ್ರದ ಮೋದಿ ಸರಕಾರ ಎಸ್.ಐ.ಆರ್ ಮೂಲಕ ಸಂವಿಧಾನವನ್ನು ಸಾಯಿಸಲು ಮುಂದಾಗಿದೆ. ಸಂವಿಧಾನದಲ್ಲಿ ಎಸ್‍ಐಆರ್ ಪ್ರಸ್ತಾಪವೂ ಇಲ್ಲ, ಇದಕ್ಕೆ ಸಂವಿಧಾನದ ಬಲವೂ ಇಲ್ಲ. ಎಸ್‍ಐಆರ್ ದೇಶದಲ್ಲಿರುವ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ಸಾರಿರುವ ದಾಳಿಯಾಗಿದೆ ಎಂದು ಪ್ರಗತಿಪರ ಚಿಂತಕ ಶಿವಸುಂದರ್ ಹೇಳಿದ್ದಾರೆ.
ಬುಧವಾರ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಎಸ್‍ಐಆರ್ ಕುರಿತ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಸ್‍ಐಆರ್ ವಿರುದ್ಧ ಬೃಹತ್ ಜನಾಂದೋಲನ ಆಗದಿದ್ದಲ್ಲಿ ದೇಶದ ಶೇ.60ರಷ್ಟು ಜನತೆ ಯಾವುದೇ ಸೌಲಭ್ಯ ಇಲ್ಲದೇ ಬದುಕಿಯೂ ಸತ್ತಂತೆ ಇರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಮತದಾನ ಪ್ರಕ್ರಿಯೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. 18 ವರ್ಷ ತುಂಬಿದ ಎಲ್ಲರನ್ನೂ ಚುನಾವಣೆಯಲ್ಲಿ ಒಳಗೊಳ್ಳುವಂತೆ ಮಾಡುವುದು ಚುನಾವಣಾ ಆಯೋಗದ ಕೆಲಸವೇ ಹೊರತು, ಹೊರಗಿಡುವುದಲ್ಲ. ಪ್ರಜಾತಾಂತ್ರಕ ವ್ಯವಸ್ಥೆ ನಿಂತಿರುವುದೇ 18 ವರ್ಷ ತುಂಬಿರುವ ಪ್ರತಿಯೊಬ್ಬರಿಗೆ ಮತದಾನ ಹಕ್ಕು ನೀಡುವುದರಲ್ಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
18 ವರ್ಷ ತುಂಬಿದ ಮೇಲೆ ಮತದಾನದ ಹಕ್ಕು ನೀಡುವುದು ಸರಕಾರದ ಕರ್ತವ್ಯ ಹಾಗೂ ಅದನ್ನು ಪಡೆಯುವುದು ನಮ್ಮ ಹಕ್ಕು. ಆದರೆ ಎಸ್‍ಐಆರ್ ಎಂಬುವುದು ಇದುವರೆಗೆ ಕೇಳಿರದ, ಇಲ್ಲದ ನಿಯಮವಾಗಿದೆ. ಎಸ್‍ಐಆರ್‌ಗೆ ಯಾವುದೇ ಸಂವಿಧಾನಬದ್ಧವಾದ ನಿಯಮಗಳಿಲ್ಲ ಎಂದರು.
2003ರಲ್ಲಿ ಪೌರತ್ವ ಕಾಯ್ದೆಗೆ ವಾಜಪೇಯಿ ಸರಕಾರ ತಿದ್ದುಪಡಿ ತಂದರು. ಅದರ ನಂತರ ಯಾವುದೇ ಪರಿಷ್ಕರಣೆ ನಡೆದಿಲ್ಲ. ಅದಕ್ಕಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದೇವೆ ಎಂದು ಸರಕಾರದ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಹೇಳುತ್ತಾರೆ. ಎಸ್‍ಐಆರ್ ಎಂದರೆ ಮೋದಿ ಸರಕಾರ 140 ಕೋಟಿ ಭಾರತೀಯರ ಮೇಲೆ ಹಾಕಿದ ಎಫ್.ಐ.ಆರ್ ಆಗಿದೆ. ನಾವು ದಾಖಲೆ ಕೊಟ್ಟು ವಿದೇಶಿಗರಲ್ಲ ಸ್ವದೇಶಿಗರರೆಂದು ಸಾಬೀತು ಪಡಿಸಬೇಕಾದ ಸ್ಥಿತಿ ಇದೆ. ಒರ್ವ ಸರಕಾರಿ ಅಧಿಕಾರಿ ನಾನು ಭಾರತೀಯನೋ ಅಥವಾ ಅಲ್ಲವೋ ಎಂಬುವುದನ್ನು ತೀರ್ಮಾನ ಮಾಡುತ್ತಾನೆ. ಇಲ್ಲಿನ ನಮ್ಮ ಅಹವಾಲಿಗೆ ಅವಕಾಶವೇ ಇಲ್ಲದಂತಾಗಿದೆ ಎಂದು ಹೇಳಿದರು.
ಎಸ್‍ಐಆರ್ ಎಂಬುದು ಮತದಾರರ ಪಟ್ಟಿಯ ಪರಿಷ್ಕಣೆ ಅಲ್ಲ, ಹೊಸದಾಗಿ ಮತದಾರರ ಪಟ್ಟಿಯ ಸಿದ್ದಪಡಿಸಲಾಗುತ್ತಿದೆ. ದಾಖಲಾತಿಗಳನ್ನು ಈ ಮುಂಚೆ ಚುನಾವಣಾ ಆಯೋಗ ಮನೆಗೆ ಬಂದು ಸಂಗ್ರಹಿಸುತ್ತಿದ್ದರು. ಇದೀಗ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೊರಿಸಲಾಗುತ್ತಿದೆ. ಚುನಾವಣಾ ಆಯೋಗ ಕೇಳುವ 11 ದಾಖಲೆಗಳ ಪೈಕಿ ಒಂದೂ ದಾಖಲೆಗಳನ್ನೂ ನಾವು ಒದಗಿಸಲು ಸಾಧ್ಯವಾಗುವುದಿಲ್ಲ. ಆಗ ನಾವು ಇದೇ ದೇಶದಲ್ಲಿ ಹುಟ್ಟಿದ್ದರೂ ವಿದೇಶಿ ವಲಸಿಗರಾಗಿ, ಸರಕಾರದ ಯಾವ ಸೌಲಭ್ಯವೂ ಇಲ್ಲದಂತೆ ಈ ದೇಶದಲ್ಲಿ ಬದುಕಬೇಕಾಗುತ್ತದೆ ಎಂದ ಅವರು, 2002ರ ಮತದಾನದ ಪಟ್ಟಿಯಲ್ಲಿ ನನ್ನ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿಯ ಹೆಸರು ಇರಬೇಕು. ಹೆಸರಿನಲ್ಲಾಗುವ ಸಣ್ಣ ದೋಷವೂ ಮತದಾರರ ಪಟ್ಟಿಯಿಂದ ನಮ್ಮ ಹೆಸರು ಕೈಬಿಡುವಂತಹ ವ್ಯವಸ್ಥೆಯನ್ನು ಎಸ್‍ಐಆರ್ ಮೂಲಕ ಹೇರಲಾಗುತ್ತಿದೆ. ನಮ್ಮದಲ್ಲದ ತಪ್ಪಿಗೆ ನಮಗೆ ಶಿಕ್ಷೆ ನೀಡುವ ಪ್ರಯತ್ನ ಎಸ್‍ಐಆರ್ ಮೂಲಕ ನಡೆಯುತ್ತಿದೆ ಎಂದರು.
ಎಸ್‍ಐಆರ್ ವೇಳೆ ಬಿ.ಎಲ್.ಓ ಮನೆಗೆ ಬಂದು ಅರ್ಜಿ ಕೊಡುತ್ತಾರೆ. ಅದನ್ನು ತುಂಬಿ ಚುನಾವಣಾ ಆಯೋಗದ ಕಚೇರಿಗೆ ನೀಡಬೇಕು. ನೀಡದಿದ್ದರೆ ನಿಮ್ಮ ಹೆಸರು ಮತದಾನ ಪಟ್ಟಿಯಿಂದ ತೆಗೆಯಬಹುದಾದ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಎಸ್‍ಐಆರ್ ಮೂಲಕ ದೇಶದಲ್ಲಿರುವ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಮಹಿಳೆಯರು, ವಲಸೆ ಕಾರ್ಮಿಕರ ಮೇಲೆ ದಾಳಿ ನಡೆಸಲಾಗುತ್ತದೆ. ಈ ಜನ ಸಮುದಾಯದ ಮತದಾನದ ಹಕ್ಕು ಕಸಿದುಕೊಂಡು ಅವರನ್ನು ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾಗುತ್ತದೆ ಎಂದ ಅವರು, ಎಸ್‍ಐಆರ್ ಮೂಲಕ ಸಂವಿಧಾನವನ್ನು ಬದಲಾಯಿಸಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಬಿಜೆಪಿ ಮತ್ತು ಆರೆಸ್ಸೆಸ್‌ನ ಹುನ್ನಾರವಾಗಿದೆ ಎಂದು ಅವರು ಎಚ್ಚರಿಸಿದರು.
ಕರ್ನಾಟಕದಲ್ಲಿ ಜೂನ್ ತಿಂಗಳಿನಲ್ಲಿ ಎಸ್‍ಐಆರ್‌ಗೆ ಚಾಲನೆ ಸಿಗಲಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಎಸ್‍ಐಆರ್ ಗೆ ಈಗಾಗಲೇ ಸಿದ್ಧತೆ ನಡೆಸಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆಯೊಂದರಲ್ಲಿ ಮಾತನಾಡಿ, ಎಸ್‍ಐಆರ್ ವೇಳೆ ಮತದಾನದ ಹಕ್ಕಿನಿಂದ ಹೊರಗುಳಿಯುವವರಿಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಸರಕಾರ ಬಿಜೆಪಿಯ ಹಿಡನ್ ಅಜೆಂಡಾವನ್ನು ಜನರ ಮೇಲೆ ಹೇರಲು ಮುಂದಾಗಿದೆ. ಇದನ್ನು ತಡೆಯಲು ಸಾಧ್ಯವಿಲ್ಲದಿದ್ದರೂ ಜನತೆ ಎಚ್ಚೆತ್ತುಕೊಂಡು ದಿಲ್ಲಿಯಲ್ಲಿ ರೈತರು ನಡೆಸಿದ ಚಳವಳಿ ಮಾದರಿಯಲ್ಲಿ ಜನಾಂದೋಲನ ನಡೆಸಿದಲ್ಲಿ ಎಸ್‍ಐಆರ್ ರದ್ದುಗೊಳಿಸುವಂತೆ ಮಾಡಲು ಸಾಧ್ಯವಿದೆ. ಇದಕ್ಕಾಗಿ ಎಸ್‍ಐಆರ್ ಬಗ್ಗೆ ಜನಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.
ಒಕ್ಕೂಟದ ಸದಸ್ಯ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಎಸ್‍ಐಆರ್ ಸಂಬಂಧ ಶಿವಸುಂದರ್ ಅವರೊಂದಿಗೆ ಸಂವಾದ ನಡೆಸಿದರು. ಕರ್ನಾಟಕ ವೈಚಾರಿಕ ಅಂಬೇಡ್ಕರ್ ವೇದಿಕೆ ಜಿಲ್ಲಾಧ್ಯಕ್ಷ ಕೆ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಹರಿಯಪ್ಪ ಮಾಸ್ಟರ್ ವೇದಿಕೆಯಲ್ಲಿದ್ದರು.






