ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿವಾದ: ಅರ್ಜಿ ವಿಚಾರಣೆ ಸೆ.10ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | Photo Credit : sci.gov.in
ಚಿಕ್ಕಮಗಳೂರು : ರಾಜ್ಯಾದ್ಯಂತ ತೀವ್ರ ರಾಜಕೀಯ ಕುತೂಹಲ ಮೂಡಿಸಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟಂಬರ್ 10ಕ್ಕೆ ಮುಂದೂಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಡಿ.ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ನಡೆಸಲಾಗಿತ್ತು. ಮರು ಎಣಿಕೆಯಲ್ಲಿ ಫಲಿತಾಂಶ ಅದಲು ಬದಲಾಗಿ ಜೀವರಾಜ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಆದರೆ, ಮರು ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜೇಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ರಾಜೇಗೌಡರ ಶಾಸಕ ಸ್ಥಾನವನ್ನು ಮುಂದುವರಿಸುವಂತೆ ಮಧ್ಯಂತರ ಆದೇಶ ನೀಡಿತ್ತು.
ಇದೀಗ ಚುನಾವಣಾ ಆಯೋಗವು ಮತ ಎಣಿಕೆಯ ಮೂಲ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ದಾಖಲೆಗಳ ಪರಿಶೀಲನೆ ಹಾಗೂ ವಾದ-ಪ್ರತಿವಾದದ ಪ್ರಕ್ರಿಯೆ ನಡೆಯಬೇಕಿದೆ.
ಈ ನಡುವೆ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟಂಬರ್ 10ಕ್ಕೆ ನಿಗದಿಪಡಿಸಿದ್ದು, ಕ್ಷೇತ್ರದ ರಾಜಕೀಯ ವಲಯದಲ್ಲಿ ಅಂತಿಮ ತೀರ್ಪಿನ ಕುರಿತು ಕುತೂಹಲ ಮುಂದುವರಿದಿದೆ.






