Sringeri | ಎಸೆಸೆಲ್ಸಿ ಪರೀಕ್ಷೆ ಬರೆದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಆಂತರಿಕ ಪರೀಕ್ಷೆ ಅಂಕ ನೀಡದೆ ಅನ್ಯಾಯ : ಪೋಷಕರ ಆರೋಪ

ಸಾಂದರ್ಭಿಕ ಚಿತ್ರ | PC : Gemini AI
ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಸರಕಾರಿ ಶಾಲೆಯಲ್ಲಿ (ಕರ್ನಾಟಕ ಪಬ್ಲಿಕ್ ಸ್ಕೂಲ್) ವ್ಯಾಸಂಗ ಮಾಡಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಖಾಸಗಿ ಶಾಲೆ ವಿದ್ಯಾರ್ಥಿಗಳೆಂದು ದಾಖಲಿಸಿ ಆಂತರಿಕ ಪರೀಕ್ಷೆಯ ಅಂಕ ನೀಡದೇ ಅನುತ್ತೀರ್ಣರನ್ನಾಗಿ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ವಿದ್ಯಾರ್ಥಿಗಳ ಪೋಷಕರು ಸಂಬಂಧಿಸಿದ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರಿಗೆ ದೂರು ನೀಡಲು ಮುಂದಾಗಿದ್ದಾರೆ.
ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದ್ದು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಶ್ರೀನಿಧಿ, ಅನ್ವಿತ್, ಪ್ರತೀಕ ಹಾಗೂ ಸಂಪ್ರಿತ್ ಎಂಬ ನಾಲ್ವರು ವಿದ್ಯಾರ್ಥಿಗಳು 2025-26ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು. ಪರೀಕ್ಷೆಯ ಫಲಿತಾಂಶ ಹೊರ ಬಿದ್ದಾಗ ನಾಲ್ವರು ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆ ಬರೆದಿದ್ದರೂ ಪರೀಕ್ಷೆಯ ಅಂಕ ಸಿಗದೆ ಅನುತ್ತೀರ್ಣರಾಗಿರುವುದು ಪೋಷಕರ ಗಮನಕ್ಕೆ ಬಂದಿದೆ.
ಫಲಿತಾಂಶದ ಅಂಕಪಟ್ಟಿ ಪರಿಶೀಲಿಸಿದ ವೇಳೆ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಆರ್ಎಫ್(ರೆಗ್ಯುಲರ್ ಫ್ರೆಶ್) ಎಂದು ದಾಖಲಿಸದೆ ಪಿಎಫ್(ಪ್ರೈವೆಟ್ ಫ್ರೆಶ್) ಎಂದು ದಾಖಲಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ನಮ್ಮ ಮಕ್ಕಳು ಇಡೀ ವರ್ಷ ಸರಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದಾರೆ. ಆದರೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಅನುತ್ತೀರ್ಣರಾದಲ್ಲಿ ಶಾಲೆಗೆ ಶೇ.100 ಫಲಿತಾಂಶ ಬರುವುದಿಲ್ಲ ಎಂಬ ಕಾರಣಕ್ಕೆ ಈ ಮಕ್ಕಳನ್ನು ಖಾಸಗಿ ಶಾಲೆಯ ಮಕ್ಕಳೆಂದು ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಅಕ್ರಮವಾಗಿ ನೋಂದಣಿ ಮಾಡಿ ಆಂತರಿಕ ಪರೀಕ್ಷೆಯ ಅಂಕ ಸಿಗದಂತೆ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಖಾಸಗಿ ಶಾಲೆಯ ಮಕ್ಕಳಿಗೆ ಆಂತರಿಕ ಪರೀಕ್ಷೆಯ ಅಂಕ ಇರುವುದಿಲ್ಲ. ನಮ್ಮ ಮಕ್ಕಳನ್ನು ಖಾಸಗಿ ಶಾಲೆಯ ವಿದ್ಯಾರ್ಥಿಗಳೆಂದು ದಾಖಲಿಸಿದ ಪರಿಣಾಮ ಆಂತರಿಕ ಪರೀಕ್ಷೆಯ ಅಂಕ ಇಲ್ಲದೇ ಅನುತ್ತೀರ್ಣರಾಗಿದ್ದಾರೆ. ಈ ಮೂಲಕ ಬಡ ದಲಿತ ಸಮುದಾಯದ ಮಕ್ಕಳ ಭವಿಷ್ಯವನ್ನು ಹಾಳು ಮಾಡಲಾಗಿದೆ. ಅಲ್ಲದೆ ಈ ಸಂಬಂಧ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರಿಗೆ ದೂರು ನೀಡಿದ ಪೋಷಕರು, ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಶಾಲೆಯ ಪೋಷಕರ ಸಭೆಯಲ್ಲಿ ಶಿಕ್ಷಕ ಚಂದ್ರೇಗೌಡ ಮತ್ತು ಸಹ ಶಿಕ್ಷಕ ಈ ಮಕ್ಕಳ ಪೋಷಕರೊಂದಿಗೆ ಮಾತನಾಡಿದ್ದ ವೇಳೆ, ನಿಮ್ಮ ಮಕ್ಕಳನ್ನು ಖಾಸಗಿಯಾಗಿ ಪರೀಕ್ಷೆ ಬರೆಸುತ್ತೇವೆ ಎಂದು ಹೇಳಿದ್ದರು. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಆದರೆ, ಶಿಕ್ಷಕರು ನಮ್ಮನ್ನು ಹೆದರಿಸಿ ಪ್ರಶ್ನೆ ಮಾಡದಂತೆ ಸೂಚಿಸಿದ್ದರೆಂದು ಸಂತ್ರಸ್ತ ವಿದ್ಯಾರ್ಥಿಗಳ ಪೋಷಕರು ‘ವಾರ್ತಾಭಾರತಿ’ ಬಳಿ ಅಳಲು ತೋಡಿಕೊಂಡಿದ್ದಾರೆ.
"ನನ್ನ ಮಗ ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು, ಈತ ಬೇಗಾರು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಆದರೆ ಪರೀಕ್ಷೆಯ ಫಲಿತಾಂಶ ಪರಿಶೀಲಿಸಿದಾಗ ಆಂತರಿಕ ಪರೀಕ್ಷೆಯ ಅಂಕ ಸಿಗದೇ ಅನುತ್ತೀರ್ಣನಾಗಿರುವುದು ಬೆಳಕಿಗೆ ಬಂದಿದೆ. ನನ್ನ ಮಗ ಸರಕಾರಿ ಶಾಲೆಯಲ್ಲಿ ಓದಿದ್ದರೂ ಖಾಸಗಿ ಶಾಲೆಯ ವಿದ್ಯಾರ್ಥಿ ಎಂದು ಹಾಲ್ ಟಿಕೆಟ್ ಮತ್ತು ಅಂಕಪಟ್ಟಿಯಲ್ಲಿ ದಾಖಲಿಸಲಾಗಿದೆ. ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಆಂತರಿಕ ಪರೀಕ್ಷೆಯ ಅಂಕ ನೀಡುವುದು ಕಡ್ಡಾಯವಾಗಿದೆ. ಆದರೆ, ಈ ಶಾಲೆಯ ಶಿಕ್ಷಕರು ನನ್ನ ಮಗನಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೆ, ಈ ಶಾಲೆಯ ಇತರ ನಾಲ್ವರು ವಿದ್ಯಾರ್ಥಿಗಳಿಗೂ ಅನ್ಯಾಯ ಆಗಿದೆ"
ಯಶೋಧಾ, ವಿದ್ಯಾರ್ಥಿಯ ಪೋಷಕರು
ಬೇಗಾರು ಶಾಲೆಯಲ್ಲಿ ಅನುತ್ತೀರ್ಣರಾದ ನಾಲ್ವರು ವಿದ್ಯಾರ್ಥಿಗಳು ರೆಗ್ಯುಲರ್ ಫ್ರೆಶ್ ವಿದ್ಯಾರ್ಥಿಗಳಲ್ಲ. ಈ ಮಕ್ಕಳು ಶಾಲೆ ಬಿಟ್ಟು ಮನೆಯಲ್ಲಿದ್ದವರು. ಮಕ್ಕಳಿಗೆ 18 ವರ್ಷ ಪೂರ್ಣವಾಗದ ಹಿನ್ನೆಯಲ್ಲಿ ಶಿಕ್ಷಕರು ಮಕ್ಕಳನ್ನು ಮಧ್ಯದಲ್ಲಿ ಶಾಲೆಗೆ ಕರೆ ತಂದು ಪಾಠ ಮಾಡಿದ್ದಾರೆ. ಹಾಜರಾತಿಯನ್ನೂ ನೀಡಿದ್ದಾರೆ. ಇಂತಹ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಪ್ರೈವೆಟ್ ಫ್ರೆಶ್(ಖಾಸಗಿ ಶಾಲೆ) ವಿದ್ಯಾರ್ಥಿಗಳೆಂದೇ ದಾಖಲಿಸುವುದು ಸರಕಾರದ ನಿಯಮವಾಗಿದೆ. ಹೀಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಆಂತರಿಕ ಪರೀಕ್ಷೆಯ ಅಂಕ ನೀಡುವಂತಿಲ್ಲ. ಪೋಷಕರು ಈ ಬಗ್ಗೆ ತಪ್ಪು ತಿಳುವಳಿಕೆಯಿಂದ ಆರೋಪ ಮಾಡಿರಬಹುದು. ನನಗೆ ಈ ಸಂಬಂಧ ಯಾವುದೇ ದೂರು ಬಂದಿಲ್ಲ. ದೂರು ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ವರಲಕ್ಷ್ಮೀ, ಬಿಇಒ ಶೃಂಗೇರಿ






