ತರೀಕೆರೆ: ಸಮವಸ್ತ್ರ ಇಲ್ಲ ಎಂದು ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಮಗಳೂರು: ಯೂನಿಫಾರಂ ಇಲ್ಲ ಎಂದು ಮನನೊಂದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತರೀಕೆರೆ ತಾಲೂಕಿನಲ್ಲಿ ಮಂಗಳವಾರ ವರದಿಯಾಗಿದೆ.
ನಂದಿತಾ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ತರಿಕೇರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಸಹ್ಯಾದ್ರಿಪುರದಲ್ಲಿ ಘಟನೆ ನಡೆದಿದ್ದು, ಶಾಲೆಯಲ್ಲಿ ಸಮವಸ್ತ್ರ ಧರಿಸದ ಹಿನ್ನಲೆ ಶಿಕ್ಷಕರು ಪ್ರಶ್ನಿಸಿದ್ದರು ಎನ್ನಲಾಗಿದೆ.
ಎರಡು ವರ್ಷ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿ ಬಳಿ ಹಳೆಯ ಸಮವಸ್ತ್ರ ಕೂಡ ಇರಲಿಲ್ಲ ಎನ್ನಲಾಗಿದೆ. ಮನೆಗೆ ಬಂದು ಬಾಲಕಿ ಪೋಷಕರ ಬಳಿ ಸಮವಸ್ತ್ರ ಕೇಳಿದ್ದು, ಎರಡು ದಿನದಲ್ಲಿ ಸಿಗುತ್ತೆ ಎಂದು ತಂದೆ ತಿಳಿಸಿದ್ದರು.
ಆದರೆ ಸಮವಸ್ತ್ರ ಇಲ್ಲದ್ದಕ್ಕೆ ಮನನೊಂದಿದ್ದ ವಿದ್ಯಾರ್ಥಿನಿ ವಿಷ ಸೇವಿಸಿದ್ದು, ಅಸ್ವಸ್ಥಗೊಂಡ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.