Chikkamagaluru | ಅಕ್ರಮ ವಲಸಿಗರೆಂಬ ಶಂಕೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರ ದಾಖಲೆ ಪರಿಶೀಲನೆ: VHP, ಬಜರಂಗದಳದ 9 ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

ಚಿಕ್ಕಮಗಳೂರು: ಅಕ್ರಮ ಬಾಂಗ್ಲಾ ವಲಸಿಗರೆಂಬ ಶಂಕೆ ಮೇಲೆ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಅಸ್ಸಾಂ ಮೂಲದ ಕಾರ್ಮಿಕರ ದಾಖಲೆಗಳನ್ನು ಸಂತೆಯಲ್ಲಿ ಪರಿಶೀಲಿಸಿದ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದ್ದು, ಕಾರ್ಮಿಕರ ದಾಖಲೆ ಪರಿಶೀಲಿಸಿ ಅನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಿಶ್ವಹಿಂದು ಪರಿಷತ್ (VHP) ಮತ್ತು ಬಜರಂದಳದ 9 ಮುಖಂಡರು, ಕಾರ್ಯಕರ್ತರ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ ನಡೆದ ಬೆನ್ನಲ್ಲೇ ವಿಎಚ್‍ಪಿ ಮತ್ತು ಬಜರಂಗದಳದ ಮುಖಂಡರು, ಕಾರ್ಯಕರ್ತರು ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ, ತಾಲೂಕಿನ ವಿವಿಧ ಕಾಫಿ ತೋಟಗಳಲ್ಲಿ ಬಾಂಗ್ಲಾ ಮೂಲದವರು ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಕೆಲಸಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ವಾರದೊಳಗೆ ಅಕ್ರಮ ಬಾಂಗ್ಲಾ ವಲಸಿಗರ ದಾಖಲೆಗಳನ್ನು ಪರಿಶೀಲಿಸಿ ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಗಡುವು ನೀಡಿದ್ದರು.
ಈ ಗಡುವು ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಮೂಡಿಗೆರೆ ಪಟ್ಟಣದಲ್ಲಿ ವಾರದ ಸಂತೆ ನಡೆಯುತ್ತಿದ್ದ ವೇಳೆ ಸಂತೆಗೆ ಬಂದಿದ್ದ ಅಸ್ಸಾಂ ಮೂಲದ ಕೆಲ ಕಾರ್ಮಿಕರನ್ನು ತಡೆದು ಅವರ ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳಲ್ಲಿ ಪರಿಶೀಲಿಸಿದ್ದರು. ಕೆಲ ದಾಖಲೆಗಳನ್ನು ಪಡೆದು ಎಲ್ಲವೂ ನಕಲಿ ದಾಖಲೆಗಳೆಂದು ತಿಳಿಸಿ ಬೆದರಿಕೆಯೊಡ್ಡಿ ಕಿರುಕುಳವನ್ನೂ ನೀಡಿದ್ದರು ಎಂದು ಆರೋಪಿಸಲಾಗಿದೆ.
ಅಸ್ಸಾಂ ಮೂಲದ ಕಾರ್ಮಿಕರನ್ನು ಸಂತೆಯಲ್ಲಿ ತಡೆದು ಅವರ ದಾಖಲೆಗಳನ್ನು ಯಾವುದೇ ಪೂರ್ವಾನುಮತಿ ಇಲ್ಲದೇ ಪರಿಶೀಲಿಸಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮೂಡಿಗೆರೆ ಪೊಲೀಸರು ಮೂಡಿಗೆರೆ ತಾಲೂಕಿನ ವಿಎಚ್‍ಪಿ ಮತ್ತು ಬಜರಂಗದಳ ಮುಖಂಡರಾದ ಸುದೇವ್, ಸಂತೋಷ್ ಸೇರಿದಂತೆ 9 ಮಂದಿಯ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಲ್ಲದೇ ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಸಂಬಂಧವೂ ಪೊಲೀಸರು ಸದ್ಯ ಕಾರ್ಯಪ್ರವೃತ್ತರಾಗಿದ್ದಾರೆಂದು ತಿಳಿದು ಬಂದಿದೆ.







