ಸಿ.ಟಿ.ರವಿ ಹೇಳಿಕೆ ಖಂಡನೀಯ : ಎಸ್.ವೈ.ಎಸ್

ಚಿಕ್ಕಮಗಳೂರು : ʼಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರವೂ ಇರುವುದಿಲ್ಲʼ ಎಂದು ಅವಹೇಳನಾಕಾರಿ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಚಿಕ್ಕಮಗಳೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಎದೆ ಸೀಳುವಂತಹ ಕ್ರೌರ್ಯಗಳಲ್ಲೇ ನಂಬಿಕೆ ಇರುವ ಜನ ಮಾತ್ರ ಜನರ ನಡುವೆ ಅಪನಂಬಿಕೆ ಹುಟ್ಟಿಸಿ, ಗಲಭೆ ಎಬ್ಬಿಸಿ ಸಮಾಜದಲ್ಲಿನ ಸೌಹಾರ್ದ ವಾತಾವರಣವನ್ನು ಕೆಡಿಸಲು ಯತ್ನಿಸುತ್ತಾರೆ. ಇಂದು ನೀಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದವರಲ್ಲಿ ಮುಸ್ಲಿಮರ, ಮುಲ್ಲಾಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ತಿಳಿಯುವಷ್ಟು ಅಕ್ಷರ ಜ್ಞಾನವಿದ್ದರೆ ಅವರು ಇಂತಹ ಹೇಳಿಕೆ ಕೊಡುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ದೊಡ್ಡ ಪಾತ್ರ ವಹಿಸಿದ ಪರಂಪರೆಯನ್ನು ಹೊಂದಿರುವ ಮುಸ್ಲಿಮರು, ಇದೀಗ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ನೀಟ್ ಪರೀಕ್ಷಾ ಹಗರಣದ ವಿರುದ್ಧ ಹೋರಾಟದಲ್ಲೂ ಭಾಗವಹಿಸಿದ್ದಾರೆ. ಅದು ಪ್ರತಿಯೋರ್ವನ ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಅದನ್ನು ಅವಹೇಳನ ಮಾಡುವ ಸಿ.ಟಿ.ರವಿ ಹೇಳಿಕೆ ಸಂವಿಧಾನ ವಿರೋಧಿ ಎಂದು ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಉಸ್ಮಾನ್ ಹಂಡುಗುಳಿ ಖಂಡಿಸಿದ್ದಾರೆ.




