ಕೊಪ್ಪ ತಾಲ್ಲೂಕು ಮುಸ್ಲಿಂ ಸಂಯುಕ್ತ ಒಕ್ಕೂಟದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕೊಪ್ಪ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ವ್ಯಾಪ್ತಿಯ ಹನ್ನೊಂದು ಜಮಾಅತ್ ಒಳಗೊಂಡ ಮುಸ್ಲಿಂ ಸಂಯುಕ್ತ ಒಕ್ಕೂಟದ ಆಶ್ರಯದಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಈಚೆಗೆ ನಡೆದ ಎಸ್ಎಸ್ ಎಲ್ ಸಿ, ಪಿಯುಸಿ ಪರೀಕ್ಷೆ ಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶುಕ್ರವಾರ ಕೊಪ್ಪದ ಪುರಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಆಯುರ್ವೇದಿಕ್ ಮತ್ತು ಯುನಾನಿ ವೈದ್ಯಕೀಯ ಪದವಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಜಯಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಷಾ ಗುಪ್ತಾ ಮಾತನಾಡಿ, ಇಂತಹ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮತ್ತಷ್ಟು ಸಾಧನೆಗೆ ಪ್ರೇರಣೆ ಕೊಡುತ್ತದೆ, ಇದು ಪ್ರತಿವರ್ಷ ಮುಂದುವರಿಯಬೇಕು, ವಿದ್ಯಾರ್ಥಿ ಗಳು ಮೊಬೈಲ್ ಇಂಟರ್ನೆಟ್ ನಲ್ಲಿ ಕಾಲಕಳೆಯದೆ, ದುಶ್ಚಟಗಳಿಗೆ ಬಲಿಯಾಗದೆ, ಜೀವನ ನಿರೂಪಿಸಿಕೊಳ್ಳುವತ್ತ ಗಮನ ಹರಿಸ ಬೇಕು, ಇವತ್ತು ಪಡೆದ ಸನ್ಮಾನ ಮತ್ತು ಸಂಘಟನೆಗಳ ಶ್ರಮವನ್ನು ನೀವು ಮುಂದೆ ಉತ್ತಮ ಅಧಿಕಾರಿಗಳಾಗಿ, ಉತ್ತಮ ಪ್ರಜೆಗಳಾಗುವ ಮೂಲಕ ಅದರ ಖುಣವನ್ನು ತೀರಿಸಬೇಕು ಎಂದು ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾದ ಜಯಪುರ ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮುಷ್ತಾಕ್ ಅಹ್ಮದ್ ಮಾತನಾಡಿ, ಸಚಾರ್ ವರದಿ ನಮ್ಮ ಮುಸ್ಲಿಂ ಸಮುದಾಯ ದೇಶದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ ಎಂಬ ವರದಿ ಕೊಟ್ಟಿದ್ದು ನಮಗೆಲ್ಲಾ ಗೊತ್ತಿದೆ, ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು, ಶಿಕ್ಷಣ ಜೀವನವನ್ನು ಕತ್ತಲೆಯಿಂದ ಬೆಳಕಿನೆಡೆಗೆ ತರುವ ಶಕ್ತಿ ಶಾಲಿ ವ್ಯವಸ್ಥೆ ಅದರ ಮಹತ್ವವನ್ನು ನಾವು ಅರಿತುಕೊಂಡಲ್ಲಿ ನಾವು ಸಮಾಜದಲ್ಲಿ ಮುನ್ನೆಲೆಗೆ ಬರಲು ಸಾಧ್ಯ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಕೆಡಿಪಿ ಸದಸ್ಯ, ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಮಹಮ್ಮದ್ ಸಾಧಿಕ್ ನಾರ್ವೆ ಮಾತನಾಡಿ, ದೇಶದಲ್ಲಿ ವಕ್ಫ್ ವಿವಾದ ಉತ್ತುಂಗದಲ್ಲಿದ್ದಾಗ ಕೊಪ್ಪ ತಾಲ್ಲೂಕಿನ ಸಮಾನ ಮನಸ್ಕರೆಲ್ಲಾ ಒಂದು ಸೇರಿ ತಾಲ್ಲೂಕು ಸಂಯುಕ್ತ ಜಮಾಅತ್ ಸಂಘಟನೆಯನ್ನು ಹುಟ್ಟುಹಾಕಿದ್ದೇವೆ, ವಕ್ಫ್ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಿದ ನಂತರ ನಮ್ಮ ಈ ಒಕ್ಕೂಟವನ್ನು ತಾಲೂಕಿನ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ದಾನಿಗಳ ಸಹಾಯದಿಂದ ಬಡ ಕುಟುಂಬದ ಯುವತಿಯರ ಮದುವೆ, ಅಪಘಾತದಲ್ಲಿ ಮರಣಹೊಂದಿದವರ ಕುಟುಂಬಕ್ಕೆ ಸಹಾಯಧನ ಒದಗಿಸಿದೆ. ಮುಂದೆಯೂ ಸಹ ಒಕ್ಕೂಟ ತಾಲೂಕಿನ ಮುಸ್ಲಿಂ ಸಮುದಾಯದ ಕುಂದುಕೊರತೆ, ಸಮಸ್ಯೆಗಳತ್ತ ಶಕ್ತಿಮೀರಿ ಗಮನಹರಿಸಲು ಪ್ರಯತ್ನಿಸುತ್ತದೆ, ದಾನಿಗಳ ಪ್ರೊತ್ಸಾಹಕ್ಕೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.
ಸಂಯುಕ್ತ ಜಮಾಅತ್ ಅಧ್ಯಕ್ಷ ವೈ ಎಚ್ ಅಬ್ದುಲ್ ಹಮೀದ್ ಮಾತನಾಡಿ, ಇದು ನಮ್ಮ ಒಕ್ಕೂಟದ ಎರಡನೇ ಕಾರ್ಯಕ್ರಮ, ಕೆಲವೊಂದು ಕುಂದುಕೊರತೆ ನಮ್ಮ ಒಕ್ಕೂಟದಿಂದ ಆಗಿರಬಹುದು, ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಲು ತಮ್ಮೆಲ್ಲರ ಸಹಕಾರ ಅಗತ್ಯವಿದೆ, ನಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಇನ್ನೂ ಉತ್ತಮ ಸಾಧನೆ ಮಾಡಲು ಈ ಕಾರ್ಯಕ್ರಮ ಪ್ರೇರಣೆ ಆಗಲಿ ಎಂದು ಹಾರೈಸಿದರು.
ಬಿಎಎಂಎಸ್ ನಲ್ಲಿ ಡಾಕ್ಟರ್ ಪದವಿ ಪಡೆದ ತಾಲೂಕಿನ ಡಾ. ಮುಫೀಝಾ ರಿಯಾನಾ ಮತ್ತು ಹೋಮಿಯೋಪತಿ ಯಲ್ಲಿ ಪದವಿ ಪಡೆದ ಡಾ. ತಸ್ಮಿಯಾ ಜಿ ಎ ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನಲ್ವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವರ ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಶಫಿ ಅಹ್ಮದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸುಲ್ತಾನ್ ವಂದಿಸಿದರು.






