ತರೀಕೆರೆ: ದೇವಸ್ಥಾನ ನಿರ್ಮಿಸುವ ನೆಪದಲ್ಲಿ ಗುಡಿಸಲು ಧ್ವಂಸ ಆರೋಪ; ದಯಾಮರಣ ಕೋರಿ ಎಸ್ಪಿ ಮೊರೆ ಹೋದ ಸಂತ್ರಸ್ತರು

ಸಾಂದರ್ಭಿಕ ಚಿತ್ರ (AI)
ಚಿಕ್ಕಮಗಳೂರು: ಸುಮಾರು 20 ವರ್ಷಗಳಿಂದ ವಾಸವಿದ್ದ ಬಡ ಕುಟುಂಬವೊಂದರ ಗುಡಿಸಲನ್ನು ದೇವಸ್ಥಾನ ನಿರ್ಮಿಸುವ ನೆಪದಲ್ಲಿ ಧ್ವಂಸಗೊಳಿಸಿದ್ದಾರೆನ್ನಲಾದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎರೆಹಳ್ಳಿ ತಾಂಡ್ಯ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಸಂತ್ರಸ್ತೆ ರುದ್ರಮ್ಮ ಎಂಬವರು ತಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ. ತರೀಕೆರೆ ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಮಧ್ಯರಾತ್ರಿ ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ತಮ್ಮ ಮನೆಯನ್ನು ಕಾನೂನುಬಾಹಿರವಾಗಿ ಕೆಡವಲಾಗಿದೆ ಎಂದು ರುದ್ರಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಮನೆ ಕಳೆದುಕೊಂಡ ಸಂತ್ರಸ್ತ ಮಹಿಳೆ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಯಾವುದೇ ಆಸರೆಯಿಲ್ಲದೆ ರಸ್ತೆ ಬದಿಯ ಮರದ ಕೆಳಗೆ ವಾಸಿಸುವಂತಾಗಿದೆ. ಈ ನಡುವೆ ಗ್ರಾಮದ ಕೆಲವು ಕಿಡಿಗೇಡಿಗಳು ಸಂತ್ರಸ್ತರ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದು, ಹೆಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಹೆಣ್ಣುಮಗಳ ಪರೀಕ್ಷೆಯ ಹಾಲ್ ಟಿಕೆಟ್ ಸೇರಿದಂತೆ ಪ್ರಮುಖ ದಾಖಲೆಗಳು ಹಾಗೂ ಮನೆಯಲ್ಲಿದ್ದ ದಿನಸಿ ಸಾಮಗ್ರಿಗಳನ್ನು ನಾಶಪಡಿಸಲಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ನಮ್ಮನ್ನು ಊರಿನಿಂದ ಬಹಿಷ್ಕಾರ ಹಾಕಿರುವುದಾಗಿ ಬೆದರಿಸಲಾಗುತ್ತಿದೆ. ಅಲ್ಲದೆ, ತರೀಕೆರೆ ಪೊಲೀಸ್ ಠಾಣೆಯಲ್ಲಿ ನಮ್ಮ ವಿರುದ್ಧವೇ ಸುಳ್ಳು ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ತಕ್ಷಣವೇ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ತಮ್ಮ ಕುಟುಂಬದ ಐದು ಜನರಿಗೆ ‘ದಯಾಮರಣ’ಕ್ಕೆ ಅನುಮತಿ ನೀಡಬೇಕೆಂದು ಸಂತ್ರಸ್ತರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾರೆ.






