10,000 ಹೆಕ್ಟೇರ್ ಪ್ರದೇಶದ ಗಡಿ ಗುರುತು; ಟಾಸ್ಕ್ ಫೋರ್ಸ್ ಅವಧಿ ವಿಸ್ತರಿಸಿ ರಾಜ್ಯ ಸರಕಾರ ಆದೇಶ

ಚಿಕ್ಕಮಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರನ್ವಯ ಚಿಕ್ಕಮಗಳೂರು ಜಿಲ್ಲೆಯಲ್ಲಿನ ಅರಣ್ಯ ಮೀಸಲು ಪ್ರದೇಶಗಳಿಂದ ಹೊರತುಪಡಿಸಿರುವ 10,000 ಹೆಕ್ಟೇರ್ ಪ್ರದೇಶಕ್ಕೆ ಸರಿಯಾದ ಗಡಿ ವಿಸ್ತೀರ್ಣವನ್ನು ಗುರುತಿಸಿ ಗ್ರಾಮವಾರು, ಸರ್ವೇ ನಂಬರ್‌ಗಳನ್ನು ಗುರುತಿಸಲು ಜಂಟಿ ಮೋಜಣಿ ತಂಡಗಳ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಹಾಗೂ ಟಾಸ್ಕ್ ಫೋರ್ಸ್ ಅವಧಿಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.
ಜಂಟಿ ಮೋಜಣಿ ತಂಡಗಳು, ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಮತ್ತು ಟಾಸ್ಕ್ ಫೋರ್ಸ್ ಕಾಲಾವಧಿಯನ್ನು ದಿನಾಂಕ 31-07-2026 ರವರೆಗೆ ವಿಸ್ತರಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಶೇಷವಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕು ಮತ್ತು ಖಾಂಡ್ಯ ಹೋಬಳಿಯ ರೈತರಿಗೆ ಟಾಸ್ಕ್ ಫೋರ್ಸ್ ರಚನೆಯಿಂದ ಕಳೆದ ಕೆಲವು ದಶಕಗಳಿಂದ ಹಕ್ಕುಪತ್ರ ಪಡೆಯಲು ಪಡುತ್ತಿರುವ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಲಿದೆ.
ಟಾಸ್ಕ್ ಫೋರ್ಸ್ ಅವಧಿ ವಿಸ್ತರಣೆ ಮಾಡಲು ಶಾಸಕ ಟಿ.ಡಿ.ರಾಜೇಗೌಡರ ನಿರಂತರ ಪ್ರಯತ್ನ ಮುಖ್ಯ ಕಾರಣ. ಟಾಸ್ಕ್ ಫೋರ್ಸ್ ಜಂಟಿ ಸರ್ವೇಯಿಂದ ಅನಧಿಕೃತ ಸಾಗುವಳಿ ಸಕ್ರಮೀಕರಣಕ್ಕಾಗಿ ಬಾಕಿ ಇರುವ ವಿಸ್ತೀರ್ಣ, ಅಕ್ರಮ ಮನೆಗಳ (94ಸಿ,94ಸಿಸಿ) ಸಕ್ರಮೀಕರಣಕ್ಕೆ ಒಳಗೊಂಡಿರುವ ವಿಸ್ತೀರ್ಣ, ಸಾಗುವಳಿ ಚೀಟಿ ನೀಡಲು ಬಾಕಿ ಇರುವ ವಿಸ್ತೀರ್ಣ ಮತ್ತು ಟಿ.ಟಿ. ದಂಡ ವಿಧಿಸಿರುವ ವಿಸ್ತೀರ್ಣದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿ ಅಡಿ ಪರಿಶೀಲನೆಗೆ ಒಳಪಡಿಸಿ ಸಕ್ರಮೀಕರಣಕ್ಕೆ ಅನುವಾಗಲು 9,895 ಹೆಕ್ಟೇರ್ ಪ್ರದೇಶವನ್ನು ಗ್ರಾಮವಾರು ಮತ್ತು ಸರ್ವೇ ನಂಬರ್‌ವಾರು ಗುರುತಿಸಿ ಸರ್ವೇ ಮಾಡಿ ಹದ್ದುಬಸ್ತು ಕಾರ್ಯ ಕೈಗೊಳ್ಳಲಾಗುವುದು.
ಶೃಂಗೇರಿ ಶಾಸಕರ ರೈತ ಪರವಾದ ಈ ಪ್ರಯತ್ನದಿಂದ ಕ್ಷೇತ್ರದ ಸಾವಿರಾರು ರೈತರಿಗೆ ಅನುಕೂಲ ಆಗಲಿದೆ. ಬಗರ್ ಹುಕುಂ ಕೃಷಿ ಜಮೀನು ಮಾಡಿಕೊಂಡಿರುವ ರೈತರಿಗೆ ಹಕ್ಕುಪತ್ರ ಪಡೆಯಲು, ಈಗಾಗಲೇ ಹಕ್ಕುಪತ್ರ ಪಡೆದು ಪಹಣಿ ಆಗದ ರೈತರಿಗೆ, ಹಕ್ಕುಪತ್ರ, ಪಹಣಿ ಹೊಂದಿದ್ದರೂ ಅರಣ್ಯ ಪ್ರದೇಶ ಎಂದು ಸಮಸ್ಯೆಗೆ ಸಿಕ್ಕಿರುವ ರೈತರಿಗೆ ಇದರಿಂದ ಶಾಶ್ವತ ಪರಿಹಾರ ದೊರೆಯಲಿದೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇರುವ ಟಾಸ್ಕ್ ಪೋರ್ಸ್ ಸರಕಾರದ ಹೊಸ ಆದೇಶ ಅಲ್ಲ. ಈ ಟಾಸ್ಕ್ ಫೋರ್ಸ್ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ 2008ರಿಂದ 2017-18ರವರೆಗೆ ವಿಸ್ತರಿಸುತ್ತಾ ಬಂದಿತ್ತು. ಸರಕಾರದ ಆದೇಶ ವಿಸ್ತರಣೆ ಆದರೂ ಜಿಲ್ಲೆಯಲ್ಲಿ ಯಾವುದೇ ಜಂಟಿ ಸರ್ವೇ ನಡೆಯಲಿಲ್ಲ.
ರೈತರ ನೆರವಿಗೆ ಬರಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಂಟಿ ಸರ್ವೇ ಮಾಡಿ ರೈತರ ಸಹಾಯಕ್ಕೆ ಬರದೆ ಅದೇ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದಾದ್ಯಂತ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಮಾಡಲು ಸೆಕ್ಷನ್ 4 ಹೊರಡಿಸಿ ರೈತರ ಪಾಲಿಗೆ ಮತ್ತಷ್ಟು ಸಮಸ್ಯೆ ತಂದಿಟ್ಟರು. ಕಂದಾಯ ಭೂಮಿಯನ್ನು ಉಳಿಸಿಕೊಳ್ಳಲು ಮತ್ತು ರೈತರಿಗೆ ಹಕ್ಕುಪತ್ರ ನೀಡಲು ನಿರಂತರ ಪ್ರಯತ್ನ ನಡೆಸುತ್ತಿರುವ ಜನಪರ ಕಾಳಜಿ ಇರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ನೇತೃತ್ವದಲ್ಲಿ ರೈತರ ದಶಕಗಳ ಸಮಸ್ಯೆ ಬಗೆಹರಿಯಲಿದೆ ಎಂಬ ಆಶಾಭವನೆ ಇದೆ.
-ಎಂ.ಯೂಸುಫ್ ಪಟೇಲ್, ಜಯಪುರ







