Chikkamagaluru | ಸ್ನೇಹಿತನ ವಿವಾಹಕ್ಕೆ ಬಂದಿದ್ದ ಗದಗದ ಯುವಕ ಭದ್ರಾ ನದಿಯಲ್ಲಿ ಮುಳುಗಿ ಮೃತ್ಯು

ಚಿಕ್ಕಮಗಳೂರು: ಸ್ನೇಹಿತನ ಮದುವೆಗೆ ಬಂದಿದ್ದ ಗದಗ ಮೂಲದ ಯುವಕನೋರ್ವ ಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗದಗ ಜಿಲ್ಲೆ ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ.
ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬನ್ನೂರು ಗ್ರಾಮಕ್ಕೆ ಬಂದಿದ್ದ ಅಭಿಷೇಕ್, ಇಲ್ಲಿನ ಭದ್ರಾ ರೆಸಾರ್ಟ್ ನಲ್ಲಿ ತಂಗಿದ್ದರು. ರವಿವಾರ ಸಂಜೆ ಭದ್ರಾ ನದಿಗೆ ಈಜಲು ಅಥವಾ ನೀರಿಗಿಳಿದ ಅಭಿಷೇಕ್ ಆಕಸ್ಮಿಕವಾಗಿ ನದಿಯ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಾಳೆಹೊನ್ನೂರು ಪೊಲೀಸರು ಮತ್ತು ಸ್ಥಳೀಯರು ರವಿವಾರ ಸಂಜೆಯೇ ನದಿಯಲ್ಲಿ ಶೋಧ ನಡೆಸಿದ್ದರೂ ಅಭಿಷೇಕ್ ಪತ್ತೆಯಾಗಿರಲಿಲ್ಲ. ಸೋಮವಾರ ಮತ್ತೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜು ತಜ್ಞರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಭಿಷೇಕ್ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




