ಕೆಮ್ಮುತ್ತಿರುವ ಆರೋಗ್ಯ ವ್ಯವಸ್ಥೆಗೆ ಬಲಿಯಾಗುತ್ತಿರುವ ಮಕ್ಕಳು!

ಸಾಂದರ್ಭಿಕ ಚಿತ್ರ | Photo Credit : freepik.com
ಭಾರತದ ಆರೋಗ್ಯ ವ್ಯವಸ್ಥೆ ಮತ್ತೆ ಕೆಮ್ಮ ತೊಡಗಿದೆ. ಕ್ಷಯ, ಟಿಬಿ, ರಕ್ತಹೀನತೆಯಂತಹ ಮಾರಕ ರೋಗಗಳಿಗೆ ಮಕ್ಕಳು ನೇರ ಬಲಿಪಶುವಾಗುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸುತ್ತಿರುವ ನಡುವೆಯೇ, ರೋಗಗಳಿಗೆ ಔಷಧ ಸೇವಿಸಿದ ಕಾರಣಕ್ಕಾಗಿಯೇ ಮಕ್ಕಳು ಸಾಲು ಸಾಲಾಗಿ ಸಾಯುತ್ತಿರುವುದು ವರದಿಯಾಗುತ್ತಿವೆ. ಕೊರೋನೋತ್ತರ ದಿನಗಳಲ್ಲಿ ಔಷಧ ಕಂಪೆನಿಗಳ ಲಾಬಿಗಳು ಈ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ನಡೆಸಿದ ಹಸ್ತಕ್ಷೇಪದ ಪರಿಣಾಮಗಳನ್ನು ದೇಶ ಈಗಲೂ ಉಣ್ಣುತ್ತಿದೆ. ಹದಿ ಹರೆಯದ ಯುವಕರು ಹಠಾತ್ತನೆ ಕುಸಿದು ಬಿದ್ದು ಸಾಯುತ್ತಿರುವ ನಿಗೂಢತೆಗೆ ಆರೋಗ್ಯ ವ್ಯವಸ್ಥೆ ಇನ್ನೂ ಉತ್ತರ ಕಂಡುಕೊಂಡಿಲ್ಲ. ಇದರ ನಡುವೆ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾಯುತ್ತಿರುವುದು ಭಾರತದ ಆರೋಗ್ಯ ಕ್ಷೇತ್ರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಿದ್ದೆಯಿಂದ ಇದೀಗಷ್ಟೇ ಎಚ್ಚರಗೊಂಡಿರುವ ಸರಕಾರ ಈ ಔಷಧ ಕಂಪೆನಿಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವ ನಾಟಕವಾಡುತ್ತಿದೆ. ಆದರೆ ಭಾರತದ ಕೆಮ್ಮಿನ ಔಷಧಗಳ ಬಗ್ಗೆ ಇರುವ ಆಕ್ಷೇಪಗಳು ಇಂದು ನಿನ್ನೆಯದಲ್ಲ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ನೂರಾರು ಮಕ್ಕಳನ್ನು ಕೊಂದ ಹೆಗ್ಗಳಿಕೆ ಈ ಔಷಧ ಕಂಪೆನಿಗಳಿಗಿದೆ. ಈ ಹಿಂದೆಯೇ ಇದರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಇಂದು ಇಂತಹದೊಂದು ಸ್ಥಿತಿಯನ್ನು ಭಾರತ ಎದುರಿಸಬೇಕಾಗಿರಲಿಲ್ಲ.
2022ರ ಅಕ್ಟೋಬರ್ನಲ್ಲಿ ಆಫ್ರಿಕಾ ಖಂಡದ ಗಾಂಬಿಯಾ ದೇಶದಲ್ಲಿ ಭಾರತ ಮೂಲದ ಔಷಧ ಕಂಪೆನಿಯ ಸಿರಪ್ ಸೇವಿಸಿ ಸುಮಾರು 70 ಮಕ್ಕಳು ಮೃತಪಟ್ಟಿದ್ದರು. ಆರಂಭದಲ್ಲಿ ಗಾಂಬಿಯಾ ದೇಶದ ಆರೋಪವನ್ನು ಈ ಔಷಧ ಕಂಪೆನಿಗಳು ನಿರಾಕರಿಸಿದ್ದವು. ಆದರೆ ಅಲ್ಲಿನ ಸಂಸದೀಯ ಸಮಿತಿ ಇದರ ಬಗ್ಗೆ ಎರಡು ತಿಂಗಳ ಕಾಲ ತನಿಖೆ ನಡೆಸಿ ‘70 ಮಕ್ಕಳ ಸಾವಿಗೆ ಭಾರತದ ಮೈಡನ್ ಫಾರ್ಮಸ್ಯೂಟಿಕಲ್ಸ್ ಲಿ. ಕಂಪೆನಿಯೇ ಕಾರಣ’ ಎಂದು ವರದಿ ನೀಡಿತು. ಈ ಕಂಪೆನಿಯ ಕಲುಷಿತ ಔಷಧವನ್ನು ಸೇವಿಸಿ ಮೂತ್ರ ಪಿಂಡದ ಸಮಸ್ಯೆ, ವಾಂತಿ, ಹೊಟ್ಟೆನೋವು, ಅತಿಸಾರ ಕಾಣಿಸಿಕೊಂಡು ಅವು ಮಕ್ಕಳ ಸಾವಿಗೆ ಕಾರಣವಾಗಿತ್ತು. ಈ ಕಂಪೆನಿಯನ್ನು ಗಾಂಬಿಯಾ ಬಳಿಕ ನಿಷೇಧಿಸಿತು ಮಾತ್ರವಲ್ಲ, ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಂಡಿತು. ಭಾರತದ ವರ್ಚಸ್ಸಿನ ಮೇಲೂ ಇದು ಭಾರೀ ಪರಿಣಾಮವನ್ನು ಬೀರಿತು. ಈ ಸಂದರ್ಭದಲ್ಲಿ ಭಾರತೀಯ ಔಷಧ ಕಂಪೆನಿಗಳು ತಯಾರಿಸಿದ ನಾಲ್ಕು ಸಿರಪ್ ವಿರುದ್ಧ ವಿಶ್ವಸಂಸ್ಥೆಯು ಹೈ ಅಲರ್ಟ್ ಘೋಷಣೆ ಮಾಡಿತ್ತು. ಭಾರತದ ಕೆಲವು ಔಷಧ ಕಂಪೆನಿಗಳು ಇಂತಹ ಕಲುಷಿತ ಔಷಧಗಳನ್ನು ಆಫ್ರಿಕಾದೊಳಗಿರುವ ಕೆಲವು ಬಡ ದೇಶಗಳನ್ನು ಗುರಿಯಾಗಿಸಿ ರಫ್ತು ಮಾಡುತ್ತಿತ್ತು. ಒಂದು ರೀತಿಯಲ್ಲಿ ತಮ್ಮ ಕಲುಷಿತ ಔಷಧಗಳ ಪ್ರಯೋಗ ಪಶುಗಳಾಗಿ ಈ ದೇಶಗಳನ್ನು ಪರೋಕ್ಷವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿತ್ತು. ಗಾಂಬಿಯಾದ ಪ್ರಕರಣದ ಬೆನ್ನಿಗೇ ಉಜ್ಬೇಕಿಸ್ತಾನದಲ್ಲೂ ಭಾರತೀಯ ಔಷಧ ಕಂಪೆನಿಗಳು ಖಳ ನಾಯಕನ ಪಾತ್ರ ವಹಿಸಿದ್ದವು. ತೀವ್ರ ಉಸಿರಾಟದ ಸಮಸ್ಯೆ ಇರುವ 23 ಮಕ್ಕಳಲ್ಲಿ 18 ಮಕ್ಕಳು ಭಾರತೀಯ ಔಷಧ ಕಂಪೆನಿಯೊಂದು ತಯಾರಿಸಿದ ಔಷಧಯನ್ನು ಸೇವಿಸಿ ಮೃತಪಟ್ಟಿವೆ ಎಂದು ಆ ದೇಶ ಎರಡು ವರ್ಷಗಳ ಹಿಂದೆ ಆರೋಪಿಸಿತ್ತು. ನೊಯ್ಡಾ ಮೂಲದ ಮರಿಯನ್ ಬಯೋಟೆಕ್ ಈ ಔಷಧವನ್ನು ತಯಾರಿಸಿತ್ತು.
ಕೆಮ್ಮಿನ ಸಿರಪ್ ಕಳ್ಳಭಟ್ಟಿ ತಯಾರಿಕೆಯ ಅಡ್ಡೆಯಾಗಿ ತಮಿಳುನಾಡು, ಮಧ್ಯ ಪ್ರದೇಶ ಗುರುತಿಸಿಕೊಂಡಿದೆ. ಕೇಂದ್ರ ಸರಕಾರ ಭೋಪಾಲ್ನ ಕೊರೆಕ್ಸ್ ಸಿರಪ್ ತಯಾರಿಕೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಿದ್ದರೂ ತೆರೆಮರೆಯಲ್ಲಿ ಇದು ಮಾರಾಟವಾಗುತ್ತಲೇ ಇತ್ತು. ಇದರ ವಿರುದ್ಧ ಅರ್ಜಿದಾರರು ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲು ಹತ್ತಿದಾಗ ನ್ಯಾಯಾಲಯವು ಕಠಿಣ ಕ್ರಮ ಕೈಗೊಳ್ಳಲು ಕಳೆದ ಜನವರಿಯಲ್ಲಿ ಸರಕಾರಕ್ಕೆ ಆದೇಶ ನೀಡಿತ್ತು. ಆದರೆ ರಾಜ್ಯ ಸರಕಾರ ತೆಗೆದುಕೊಂಡ ಕ್ರಮ ಎಷ್ಟರಮಟ್ಟಿಗೆ ಕಠಿಣವಾಗಿತ್ತು ಎನ್ನುವುದು ಇದೀಗ ಸರಣಿ ಮಕ್ಕಳ ಸಾವುಗಳಿಂದ ಬಟಾಬಯಲಾಗಿದೆ. ಭೋಪಾಲ್ನಲ್ಲಿ ತಯಾರಾಗುವ ಔಷಧಗಳು ಮಾತ್ರವಲ್ಲ, ನೆರೆಯ ತಮಿಳುನಾಡಿನಿಂದಲೂ ಈ ಅಕ್ರಮ ಸಿರಪ್ಗಳು ಮಧ್ಯ ಪ್ರದೇಶಕ್ಕೆ ಪೂರೈಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶದಲ್ಲಿ ಈ ಕೆಮ್ಮಿನ ಔಷಧಗಳನ್ನು ಸೇವಿಸಿ ಮೃತಪಟ್ಟ ಮಕ್ಖಳ ಸಂಖ್ಯೆ 20ಕ್ಕೆ ಏರಿದೆ. ಮೃತಪಟ್ಟ ಹೆಚ್ಚಿನ ಮಕ್ಕಳು ರಾಜ್ಯದ ಛಿಂದ್ವಾರ ಜಿಲ್ಲೆಯವರು. ತಮಿಳುನಾಡಿನ ಕಾಂಚಿ ಪುರಂ ಮೂಲದ ಔಷಧ ಕಂಪೆನಿ ಉತ್ಪಾದಿಸಿದ ಸಿರಪ್ ಕುಡಿದ ಬಳಿಕ ಈ ಮಕ್ಕಳಲ್ಲಿ ಮೂತ್ರ ಪಿಂಡ ವಿಫಲವಾಗಿವೆ. ಹೆಚ್ಚಿನ ಸಾವುಗಳೂ ಮೂತ್ರಪಿಂಡ ವೈಫಲ್ಯದಿಂದಲೇ ಸಂಭವಿಸಿತ್ತು. ರಾಜಸ್ಥಾನ, ಮಧ್ಯಪ್ರದೇಶ, ತಮಿಳು ನಾಡಿನಲ್ಲಿ ಸಂಭವಿಸಿದ ಸಾವಿನ ಬಳಿಕ ಎಲ್ಲ ರಾಜ್ಯಗಳು ಒಮ್ಮೆಲೆ ಎಚ್ಚರಗೊಂಡಿವೆ. ಪಂಜಾಬ್, ಹಿಮಾಚಲ ಪ್ರದೇಶ, ಕೇರಳ, ಅರುಣಾಚಲ ಸೇರಿದಂತೆ ಬಹುತೇಕ ರಾಜ್ಯಗಳು ಕೋಲ್ಡ್ರಿಫ್ ಸೇರಿದಂತೆ ಹಲವು ಔಷಧ ಕಂಪೆನಿಗಳ ಸಿರಪ್ಗಳನ್ನು ನಿಷೇಧಿಸಿವೆ. ಗಂಭೀರ ಸ್ಥಿತಿಯಲ್ಲಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಭರಿಸಲಿದ್ದೇನೆ ಎಂದು ಮಧ್ಯ ಪ್ರದೇಶ ಸರಕಾರ ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಮೃತಪಟ್ಟ ಮಕ್ಕಳಿಗೆ ಪರಿಹಾರ ನೀಡುವುದು ಕೂಡ ಸರಕಾರದ ಜವಾಬ್ದಾರಿಯಾಗಿದೆ. ಯಾಕೆಂದರೆ ಈ ಕಳಪೆ ಔಷಧಗಳ ಮಾರಾಟಗಳಲ್ಲಿ ಔಷಧ ಕಂಪೆನಿಗಳು ಮಾತ್ರವಲ್ಲ, ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಪಾತ್ರವೂ ಬಹುದೊಡ್ಡದಿದೆ. ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕವೂ ಸರಕಾರ ವಹಿಸಿದ ನಿರ್ಲಕ್ಷ್ಯ ಇಂತಹದೊಂದು ಭಾರೀ ದುರಂತಕ್ಕೆ ಕಾರಣವಾಗಿದೆ ಎನ್ನುವುದು ಸಂಬಂಧಪಟ್ಟವರು ಒಪ್ಪಿಕೊಳ್ಳಲೇ ಬೇಕು.
ತನಿಖೆಯಿಂದ ಔಷಧ ತಯಾರಕ ಕಂಪೆನಿಗಳ ಕರ್ಮಕಾಂಡಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ತಮಿಳುನಾಡಿನ ಔಷಧ ನಿಯಂತ್ರಣ ಇಲಾಖೆಯು ಅ.1 ಮತ್ತು 2ರಂದು ಕಂಪೆನಿಯ ಮೇಲೆ ದಾಳಿ ನಡೆಸಿದಾಗ ಅಲ್ಲಿನ ಸ್ಥಿತಿ ಕಂಡು ಅಧಿಕಾರಿಗಳು ದಂಗು ಬಡಿದು ಹೋಗಿದ್ದಾರೆ. ಗ್ಯಾಸ್ಸ್ಟವ್ಗಳ ಮೇಲೆ ಬಿಸಿ ಮಾಡಲಾಗುತ್ತಿದ್ದ ರಾಸಾಯನಿಕಗಳ ಕಡಾಯಿಗಳು, ಸೋರಿಕೆಯಾಗುತ್ತಿದ್ದ ಪ್ಲಾಸ್ಟಿಕ್ ಕೊಳವೆಗಳು, ತುಕ್ಕು ಹಿಡಿದ ಉಪಕರಣಗಳು, ಯಾವುದೇ ಕೈಗವಸು, ಮಾಸ್ಕ್ ಧರಿಸದೆ ರಾಸಾಯನಿಕ ಪದಾರ್ಥಗಳನ್ನು ಮಿಶ್ರಣಗೊಳಿಸುತ್ತಿದ್ದ ತರಬೇತಿ ಪಡೆಯದ ಕಾರ್ಮಿಕರನ್ನು ಅವರು ಎದುರುಗೊಳ್ಳಬೇಕಾಯಿತು. ನಿಜಕ್ಕೂ ಅಲ್ಲಿ ಔಷಧಗಳು ತಯಾರಾಗುತ್ತಿದ್ದವೋ ಕಳ್ಳಭಟ್ಟಿ ಸಾರಾಯಿ ತಯಾರಾಗುತ್ತಿತ್ತೋ ಎಂದು ಅನುಮಾನ ಪಡುವ ಸ್ಥಿತಿಯಿತ್ತು. ಅವರು ರೋಗಕ್ಕಾಗಿ ಔಷಧಗಳನ್ನು ತಯಾರಿಸುತ್ತಿರಲಿಲ್ಲ, ಬದಲಿಗೆ ರೋಗಗಳನ್ನು ಹರಡುವುದಕ್ಕಾಗಿ ಔಷಧಿಗಳನ್ನು ತಯಾರಿಸುತ್ತಿದ್ದರು. ಒಂದು ರೀತಿಯಲ್ಲಿ, ಮಕ್ಕಳ ಸಾವು ಯಾವುದೇ ಅವಘಡವಲ್ಲ. ಅದೊಂದು ಹತ್ಯಾಕಾಂಡವಾಗಿದೆ. ಕಳ್ಳಭಟ್ಟಿ ತಯಾರಕರಿಗಿಂತಲೂ ಕ್ರಿಮಿನಲ್ ಮನಸ್ಥಿತಿ ಹೊಂದಿದ ಕಂಪೆನಿ ಮಾಲಕರು ಇಂತಹ ಔಷಧಗಳನ್ನು ತಯಾರಿಸಿ ಅದನ್ನು ಈ ದೇಶದ ಬಡಮಕ್ಕಳನ್ನು ಗುರಿಯಾಗಿಸಿಕೊಂಡು ಹಂಚಿದ್ದಾರೆ. ಸುಮಾರು 20ಕ್ಕೂ ಅಧಿಕ ಮಕ್ಕಳ ಸಾವಿನ ಬಳಿಕ ಸರಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವ ನಾಟಕವಾಡುತ್ತಿದೆ. ಈ ಹಿಂದೆಯೂ ಸಾವು ಸಂಭವಿಸಿದಾಗ ಸರಕಾರ ಇದೇ ರೀತಿ ವರ್ತಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ನಕಲಿ ಔಷಧ ಕಂಪೆನಿಗಳು ಆರೋಗ್ಯ ಇಲಾಖೆಯ ಮೂಗಿನ ಕೆಳಗೆ ಎಂದಿನಂತೆ ಕಾರ್ಯ ನಿರ್ವಹಿಸತೊಡಗಿತ್ತು. ಈ ದುರಂತದಲ್ಲಿ ಶಾಮೀಲಾಗಿರುವ ಆರೋಗ್ಯ ಇಲಾಖೆಯನ್ನು ಕಟಕಟೆಯಲ್ಲಿ ನಿಲ್ಲಿಸಬೇಕಾಗಿದೆ. ಆಯಾ ರಾಜ್ಯಗಳ ಆರೋಗ್ಯ ಸಚಿವರು ದುರಂತದ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು. ದೇಶಾದ್ಯಂತ ಹರಡಿಕೊಂಡಿರುವ ಇಂತಹ ಔಷಧ ಕಂಪೆನಿಗಳನ್ನು ಗುರುತಿಸಿ ಅವುಗಳಿಗೆ ಬೀಗ ಜಡಿಯಲು ಉನ್ನತ ಮಟ್ಟದ ತನಿಖೆ ನಡೆಯಬೇಕಾಗಿದೆ. ಇದರ ಹಿಂದಿರುವ ಅಧಿಕಾರಿಗಳು ಮತ್ತು ರಾಜಕೀಯ ನೇತಾರರನ್ನು ಗುರುತಿಸಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗಿದೆ.







