ಚಿತ್ರದುರ್ಗ | ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮನೆ ಮೇಲೆ ಈಡಿ ದಾಳಿ

ಚಿತ್ರದುರ್ಗ : ಚಿತ್ರದುರ್ಗ ಕಾಂಗ್ರೆಸ್ ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿಯವರ ಮನೆ ಮತ್ತು ಅವರ ಸಹೋದರರ ನಿವಾಸಗಳ ಮೇಲೆ ಇಂದು ಬೆಳ್ಳಂಬೆಳ್ಳಿಗೆ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಳ್ಳಕೆರೆಯ ಹಳೇ ಟೌನ್ ವೀರಭದ್ರಸ್ವಾಮಿ ದೇವಾಲಯದ ಸಮೀಪದಲ್ಲಿರುವ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮತ್ತು ಅವರ ಅಣ್ಣ ಕೆ.ಸಿ.ನಾಗರಾಜ್, ಕೆ.ಸಿ.ತಿಪ್ಪೇಸ್ವಾಮಿ ಇವರ ಮನೆಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ದಾಖಲೆಗಳನ್ನು ಶೋಧನೆ ನಡೆಸಿದ್ದಾರೆ.
ಗೋವಾ, ಶ್ರೀಲಂಕಾಗಳಲ್ಲಿ ಕ್ಯಾಸಿನೋ ಹೊಂದಿರುವ ಶಾಸಕ ವಿರೇಂದ್ರ ಪಪ್ಪಿ ಮತ್ತು ಅವರ ಕುಟುಂಬದವರು ಅಕ್ರಮ ಹಣ ಗಳಿಕೆಯಲ್ಲಿ ತೊಡಗಿದ್ದು, ಕೋಟ್ಯಾಂತರ ರೂ. ಹಣವನ್ನು ಸರಕಾರಕ್ಕೆ ತೆರಿಗೆ ವಂಚನೆಮಾಡಿರುವ ಆರೋಪದ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಳ್ಳಕೆರೆ, ಚಿತ್ರದುರ್ಗ ಮತ್ತು ಬೆಂಗಳೂರು ನಿವಾಸಗಳ ಮೇಲೂ ಏಕ ಕಾಲದಲ್ಲಿ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋವಾದಲ್ಲಿ ದಾಖಲಾಗಿದ್ದ ಪ್ರಕರಣದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೆ.ಸಿ.ವಿರೇಂದ್ರ ಪಪ್ಪಿ ಮತ್ತು ಸಹೋದರ ಕೆ.ಸಿ.ನಾಗರಾಜ್, ಕೆ.ಸಿ.ತಿಪ್ಪೇಸ್ವಾಮಿ ಮತ್ತು ಕುಟುಂಬದವರ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗೇಮಿಂಗ್ ಆ್ಯಪ್‍ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಈಡಿ ದಾಳಿ ನಡೆದಿದ್ದು, ದಾಳಿಯ ಸಂದರ್ಭದಲ್ಲಿ ಅಪಾರ ಪ್ರಮಾಣದ ದಾಖಲೆ ಪತ್ರಗಳು ಲಭ್ಯವಾಗಿದೆ. ಇಂದು ಬೆಳಿಗ್ಗೆ ಚಳ್ಳಕೆರೆ ನಿವಾಸಗಳಿಗೆ ಸುಮಾರು 40ಕ್ಕೂ ಹೆಚ್ಚು ಈಡಿ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಕೆ.ಸಿ.ವಿರೇಂದ್ರ ಪಪ್ಪಿಗೆ ಸಂಬಂಧಿಸಿದ ರತ್ನ ಗೋಲ್ಡ್, ರತ್ನ ಮಲ್ಟಿ ಸೋರ್ಸಸ್, ರತ್ನ ಗೇಮಿಂಗ್, ಪಪ್ಪಿ ಟೆಕ್ನೋಲಜಿಸ್ ಸೆಲೂಷನ್ಸ್ ಸೇರಿದಂತೆ ವಿವಿಧ ಕಂಪನಿಗಳ ಹೆಸರಿನಲ್ಲಿ ಅಕ್ರಮ ಸಂಪಾದನೆ ನಡೆಸಿರುವ ಬಗ್ಗೆ ಈಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿರುವ ಕಾರಣ ಸುಮಾರು 17 ಕಡೆ ಏಕಕಾಲದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ದಾಳಿ ನಡೆಸಿದ್ದಾರೆ.
ಕೆ.ಸಿ.ವಿರೇಂದ್ರ ಪಪ್ಪಿ ಅವರ ನಿವಾಸದ ಮೇಲೆ 2016 ಡಿಸೆಂಬರ್ 11 ರಂದು ಐಟಿ ದಾಳಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಟಾಯ್ಲೆಟ್ ರೂಮಿನ ಗೋಡೆಯಲ್ಲಿ ಸುಮಾರು 29ಕ್ಕೂ ಹೆಚ್ಚು ಕೆಜಿ ಚಿನ್ನ ಹಾಗೂ 5 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದ ಐಟಿ ಅಧಿಕಾರಿಗಳು, ಆ ಸಂದರ್ಭದಲ್ಲಿ ಕೇಸು ದಾಖಲಿಸಿದ್ದರು.
ಅಕ್ರಮ ಹಣ ಗಳಿಕೆಗೆ ಸಂಬಂಧಿಸಿದಂತೆ ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೇಸು ದಾಖಲಾಗಿದ್ದು, ಆ ಹಿನ್ನೆಲೆಯಲ್ಲಿ ಜಾರಿ ನಿರ್ದೆಶನಾಲಯ(ಈಡಿ) ಅಧಿಕಾರಿಗಳು, ಚಳ್ಳಕೆರೆ, ಚಿತ್ರದುರ್ಗ, ಬೆಂಗಳೂರು ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.







