ಚಿತ್ರದುರ್ಗ: ಕಾರು-ಲಾರಿ ಮಧ್ಯೆ ಭೀಕರ ಅಪಘಾತ: ಐವರು ಸ್ಥಳದಲ್ಲೇ ಮೃತ್ಯು

ಚಿತ್ರದುರ್ಗ, ಮಾ.9: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಚಲಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ರವಿವಾರ ಮಧ್ಯಾಹ್ನ 11:30ರ ಸುಮಾರಿಗೆ ಸಂಭವಿಸಿದೆ.
ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ(50), ವಿದ್ಯಾರಣ್ಯಪುರದ ರುದ್ರಸ್ವಾಮಿ(52), ಬೆಂಗಳೂರು ಉತ್ತರದ ಈರಣ್ಣ ಬಡಾವಣೆ ನಿವಾಸಿ ಮಲ್ಲಿಕಾರ್ಜುನ(50) ಹಾಗೂ ಇನ್ನಿಬ್ಬರು ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಕಾರಿನಲ್ಲಿದ್ದ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸಿಬಾರ ಗ್ರಾಮದ ಹೊಸ ಹೈವೇಯ ಐರಾವತ ಹೋಟೆಲ್ ಸಮೀಪ ಇಂದು ಮಧ್ಯಾಹ್ನ 11:30ರ ಸುಮಾರಿಗೆ ಚಲಿಸುತ್ತಿದ್ದ ಲಾರಿಗೆ ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ಅತೀ ವೇಗದಲ್ಲಿ ಚಲಿಸುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.