ಚಿತ್ರದುರ್ಗ | ಬಾಲಕಿಗೆ ತಾಳಿ ಕಟ್ಟಿಸಿಕೊಳ್ಳುವಂತೆ ಬಲವಂತ ಮಾಡಿದ ವಿಡಿಯೋ ವೈರಲ್ : ಐವರ ಬಂಧನ

ಚಿತ್ರದುರ್ಗ: ಚಳ್ಳಕೆರೆ ತಾಲೂಕು ರೆಡ್ಡಿಹಳ್ಳಿ ಗ್ರಾಮದ ಬುಡಕಟ್ಟು ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿಸಿಕೊಳ್ಳುವಂತೆ ಬಲವಂತ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಳ್ಳಕೆರೆ ತಾಲ್ಲೂಕು ಕೇಂದ್ರದ ಶಾಲೆಯೊಂದರಲ್ಲಿ ಎಂಟನೇಯ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕಿಯನ್ನು ಕುಟುಂಬಸ್ಥರೇ ಬಲವಂತವಾಗಿ ಕೃಷ್ಣ ಎಂಬ ಯುವಕನ ಜೊತೆ ಮದುವೆ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ʼನನ್ನನ್ನು ಕಾಪಾಡಿ, ಈ ಮದುವೆ ನನಗೆ ಬೇಡ, ಎಂದು ಬಾಲಕಿ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ, ಮದುವೆ ಮಾಡಬೇಕೆಂದು ಪಟ್ಟು ಹಿಡಿದಿರುವ ಪೋಷಕರು, ಬಾಲಕಿಯನ್ನು ಹೊಡೆದು ಬಡಿದು ಎಳೆದಾಡುತ್ತಿರುವುದುʼ ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ.
ವೀಡಿಯೊ ವೈರಲ್ ಬೆನ್ನಲ್ಲೇ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಸದಸ್ಯರಾದ ಡಾ.ತಿಪ್ಪೇಸ್ವಾಮಿ, ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು, ಬಾಲಕಿಗೆ ತಾಳಿ ಕಟ್ಟಿಸಿಕೊಳ್ಳುವಂತೆ ಬಲವಂತ ಮಾಡಿದ ಐವರನ್ನು ಬಂಧಿಸಿದ್ದಾರೆ.
ಇದಲ್ಲದೇ ಕರ್ತವ್ಯ ಲೋಪ, ನಿರ್ಲಕ್ಷ್ಯ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಬಣಕಾರ, ಪವಿತ್ರ ಮತ್ತಿತರ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿದೆ.