ಕಾಂಗ್ರೆಸ್ಸಿಗರ ಕುರ್ಚಿ ಕಾದಾಟದಿಂದ ಅಭಿವೃದ್ಧಿ ಶೂನ್ಯ : ಬಿ.ವೈ.ವಿಜಯೇಂದ್ರ

ಬಿ.ವೈವಿಜಯೇಂದ್ರ
ಚಿತ್ರದುರ್ಗ: ಕಾಂಗ್ರೆಸ್ ನಾಯಕರ ಕುರ್ಚಿ ಕಾದಾಟದಿಂದಾಗಿ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದ್ದು, ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬುಧವಾರ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜರ್ಮನಿಯ ಚಾನ್ಸೆಲರ್ ಕರ್ನಾಟಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರಾಜ್ಯಕ್ಕೆ ಹೂಡಿಕೆ ತರುವ ಬಗ್ಗೆ ಗಮನಹರಿಸಬೇಕಿದ್ದ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಹಾಗೂ ಉಪಮುಖ್ಯಮಂತ್ರಿಗಳು ಕುರ್ಚಿ ಕಸಿದುಕೊಳ್ಳಲು ದೆಹಲಿ ನಾಯಕರ ಹಿಂದೆ ಬಿದ್ದಿದ್ದಾರೆ. ಒಬ್ಬರು ನಾಯಕರ ತಾಳ್ಮೆ ಕೆಣಕಬೇಡಿ ಎನ್ನುತ್ತಾರೆ, ಮತ್ತೊಬ್ಬರು ಸಿಎಂ ಆಗಲು ಸಿದ್ಧರಾಗಿದ್ದಾರೆ. ಇವರ ಈ ಜಗಳದಿಂದ ರಾಜ್ಯದ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ. 17 ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ :
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ವೈಫಲ್ಯ, ಡ್ರಗ್ಸ್ ಹಾವಳಿ ಹಾಗೂ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜ.17 ರಂದು ಬಳ್ಳಾರಿಯಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿದಂತೆ ಪಕ್ಷದ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಅಲ್ಲದೆ, ಬಳ್ಳಾರಿ ಪಾದಯಾತ್ರೆಯ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲಾಗಿದ್ದು, ಶೀಘ್ರವೇ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿಯವರು ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು 'ವಿಕಸಿತ ಭಾರತ ಜಿ ರಾಮ್ ಜಿ' (VB Gram-G) ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹಳೆಯ ಮನ್ರೇಗಾ ಯೋಜನೆಯಲ್ಲಿದ್ದ ಭ್ರಷ್ಟಾಚಾರವನ್ನು ತಡೆದು, ನೇರವಾಗಿ ಗ್ರಾಮೀಣ ಭಾಗದ ಆಸ್ತಿ ನಿರ್ಮಾಣಕ್ಕೆ ಇದು ಒತ್ತು ನೀಡಲಿದೆ. ಕೃಷಿ ಚಟುವಟಿಕೆಯ ಸಮಯದಲ್ಲಿ ರೈತರಿಗೆ ಅನುಕೂಲವಾಗುವಂತೆ ಕೂಲಿ ಕೆಲಸಕ್ಕೆ ರಜೆ ನೀಡುವ ವೈಜ್ಞಾನಿಕ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಆದರೆ ಕಾಂಗ್ರೆಸ್ ನಾಯಕರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಬಿಜೆಪಿ ಇದನ್ನು ಗ್ರಾಮ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಿಕೊಡಲಿದೆ ಎಂದು ಸ್ಪಷ್ಟಪಡಿಸಿದರು.







