ಮೊಳಕಾಲ್ಮೂರು ತಾಲೂಕನ್ನು ಆಂಧ್ರಕ್ಕೆ ಸೇರಿಸಿ : ಶಾಸಕ ಗೋಪಾಲಕೃಷ್ಣ ಅಸಮಾಧಾನ

ಚಿತ್ರದುರ್ಗ : ರಾಜಕೀಯ, ಸಾಮಾಜಿಕ, ಅಭಿವೃದ್ಧಿಯ ಹಿತದೃಷ್ಟಿಯಿಂದ ಮೊಳಕಾಲ್ಮೂರು ತಾಲೂಕನ್ನು ಆಂಧ್ರ ಪ್ರದೇಶಕ್ಕೋ ಅಥವಾ ಚಳ್ಳಕೆರೆ ಕ್ಷೇತ್ರಕ್ಕೋ ಸೇರ್ಪಡೆ ಮಾಡಿದರೆ ಒಳ್ಳೆಯದು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದ್ದು, ಅವರ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಮೊಳಕಾಲ್ಮೂರು ತಾಲೂಕು ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ನನಗೆ ಸ್ಥಾನಮಾನ ನೀಡದೆ ಕಡೆಗಣಿಸಿರುವುದು ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ರಾಜಕೀಯವಾಗಿ ಸ್ಥಾನಮಾನಕ್ಕೆ ಹೋರಾಟ ನಡೆಸಬೇಕು. ಹಾಗೆಯೇ ಅಭಿವೃದ್ಧಿಗೂ ಆದ್ದರಿಂದ ಆಂಧ್ರಕ್ಕೆ ಸೇರಿಸಿದರೆ ತಾಲೂಕು ಅಭಿವೃದ್ಧಿಯಾಗುತ್ತದೆ ಎಂದಿದ್ದಾರೆ.
ಮೊಳಕಾಲ್ಮೂರು ಮತ್ತು ಚಳ್ಳಕೆರೆ ಭಾಗದ ಅಭಿವೃದ್ಧಿ ಇಂದಿಗೂ ಮರೀಚೆಗೆ ಆಗಿದ್ದು, ನೀರಾವರಿ, ಕೈಗಾರಿಕೆ ಸೇರಿ ಯಾವುದೇ ಕ್ಷೇತ್ರ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಸ್ಪಷ್ಟನೆ: ಶಾಸಕರ ಹೇಳಿಕೆ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಅವರು, ನಾನು ಹೈದಾರಬಾದ್ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ್ದು ನಿಜ. ಆದರೆ, ನನ್ನ ಹೇಳಿಕೆ ತಿರುಚಲಾಗಿದೆ. ಬಾಯಿ ತಪ್ಪಿನಿಂದಾಗಿ ಆಂಧ್ರ ಅಂತ ಬಳಕೆಯಾಗಿದೆ. ಉದ್ದೇಶ ಪೂರಕವಾಗಿ ನೀಡಿದ ಹೇಳಿಕೆ ಅಲ್ಲವೆಂದು ಶಾಸಕ ಗೋಪಾಲಕೃಷ್ಣ ಸ್ಪಷ್ಟನೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ ಪ್ರದೇಶಗಳನ್ನು ಬಹಳ ಮುರ್ತುವಜಿ ವಹಿಸಿ ಅಭಿವೃದ್ಧಿ ಪಡಿಸಬೇಕೆಂಬ ಅರ್ಥದಲ್ಲಿ ಮಾತನಾಡಲಾಗಿದೆಯೇ ವಿನಃ ಬೇರೇನೂ ಇಲ್ಲ ಎಂದು ಶಾಸಕ ಗೋಪಾಲಕೃಷ್ಣ ತಿಳಿಸಿದ್ದಾರೆ.






