ಹಿರಿಯೂರು ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಗೂ ಅಧಿಕ ಅನುದಾನ, 3 ಸಾವಿರ ಮನೆ ಮಂಜೂರು: ಸಿಎಂ ಡಿ.ಕೆ.ಶಿವಕುಮಾರ್
"ದಳ, ಬಿಜೆಪಿಯವರು ಮನೆ ಬಾಗಿಲಿಗೆ ಬಂದರೆ ಬಹಿಷ್ಕಾರ ಹಾಕಿ"

ಹಿರಿಯೂರು : ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ 2 ಸಾವಿರ ಕೋಟಿ ರೂ. ಗೂ ಅಧಿಕ ಅನುದಾನ ನೀಡಿದ್ದು, 3 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ. 1,087 ಎಕರೆ ಜಮೀನು ಗುರುತಿಸಲಾಗಿದ್ದು, ಇದರ ಮೂಲಕ 17,434 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಹಿರಿಯೂರಿನಲ್ಲಿ ಶನಿವಾರ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಳ ಹಾಗೂ ಬಿಜೆಪಿಯವರು ಹಿರಿಯೂರು ಮತ್ತು ರಾಜ್ಯದ ಜನರಿಗಾಗಿ ಒಂದೇ ಒಂದು ಜನಪರ ಯೋಜನೆ ಜಾರಿಗೆ ತಂದಿದ್ದಾರೆಯೇ ಎಂದು ಪ್ರಶ್ನಿಸಿದರು. ದಳ ಮತ್ತು ಬಿಜೆಪಿಯವರು ಮನೆ ಬಾಗಿಲಿಗೆ ಬಂದರೆ ಬಹಿಷ್ಕರಿಸಿ. ಇಷ್ಟೊಂದು ಯೋಜನೆಗಳನ್ನು ಅವರು ನೀಡಿದ್ದಾರೆಯೇ? ಕಾಂಗ್ರೆಸ್ ಸರ್ಕಾರ ಜನರ ಮನೆ ಬಾಗಿಲಿಗೆ ಬಂದು ಅನುಕೂಲ ಕಲ್ಪಿಸಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಕೊಡಿಸಲಿ :
ಜನರಿಗೆ ದಳ ಹಾಗೂ ಬಿಜೆಪಿಯವರ ಮೇಲೆ ವಿಶ್ವಾಸವಿಲ್ಲ. ನಮ್ಮ ಜನರು ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರ ಮಕ್ಕಳನ್ನು ಸೋಲಿಸಿದ್ದಾರೆ. ಸಂಸದ ಗೋವಿಂದ ಕಾರಜೋಳ ಅವರು ಒಬ್ಬ ರೈತನಿಗಾದರೂ ಸಹಾಯ ಮಾಡಿದ್ದಾರೆಯೇ? ಬಿಜೆಪಿಯವರು ಮೊದಲು ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಲಿ ಎಂದು ಸವಾಲು ಹಾಕಿದರು.
ಹಿರಿಯೂರಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುತ್ತಿದ್ದು, ಬರವನ್ನು ದೂರ ಮಾಡಿದ್ದೇವೆ. ಐದು ಗ್ಯಾರಂಟಿಗಳ ಜೊತೆಗೆ ಭೂ ಗ್ಯಾರಂಟಿ, ನೀರಿನ ಗ್ಯಾರಂಟಿ ಹಾಗೂ ಬದುಕಿನ ಗ್ಯಾರಂಟಿಯನ್ನೂ ನೀಡಿದ್ದೇವೆ. ಇಷ್ಟೆಲ್ಲ ಕೊಡುಗೆ ನೀಡಿರುವ ಸರ್ಕಾರಕ್ಕೆ ಹಿರಿಯೂರಿನ ಜನತೆ ಕೂಲಿ ನೀಡಿ ಆಶೀರ್ವದಿಸಬೇಕು. ಅಭಿವೃದ್ಧಿಯ ಪ್ರಗತಿಯ ಲಕ್ಷ್ಮಿ ಹಿರಿಯೂರು ಕ್ಷೇತ್ರಕ್ಕೆ ಕಾಲಿಟ್ಟಿದ್ದಾಳೆ. ಇಂತಹ ಅದೃಷ್ಟಲಕ್ಷ್ಮಿಯನ್ನು ಉಳಿಸಿಕೊಳ್ಳುವುದು ಜನರಿಗೆ ಬಿಟ್ಟಿದ್ದು ಎಂದು ಮನವಿ ಮಾಡಿದರು.
ಮಹಿಳೆಯರ ಹೆಸರಿಗೆ ನಿವೇಶನ :
ಹೆಣ್ಣು ಕುಟುಂಬದ ಕಣ್ಣು. ಈ ಕಾರಣಕ್ಕಾಗಿ ಮಹಿಳೆಯರ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. 30/40 ಅಳತೆಯ ನಿವೇಶನಗಳನ್ನು ಕುಟುಂಬದ ಮಹಿಳೆಯರ ಹೆಸರಿಗೆ ನೀಡಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿ ಹಿರಿಯೂರಿಗೆ ಬಂದಾಗಲೇ ನನಗೆ ಕನಕಪುರ ಬೇರೆ ಅಲ್ಲ, ಹಿರಿಯೂರು ಬೇರೆ ಅಲ್ಲ ಎಂದು ಹೇಳಿದ್ದೆ. ಈ ಹಿರಿಯೂರು ನನ್ನ ಹಿರಿಯಣ್ಣ, ಹಿತೈಷಿ, ಹಿತಚಿಂತಕ ಹಾಗೂ ಗೆಳೆಯ ಸುಧಾಕರ್ ಅವರ ಕ್ಷೇತ್ರ. ಸುಧಾಕರ್ ಕಂಡ ಕನಸುಗಳು ನಿಂತುಹೋಗಬಾರದು ಎಂಬ ಕಾರಣಕ್ಕೆ ಹಿರಿಯೂರಿಗೆ ಬಂದಿದ್ದೇನೆ. ಗೆಳೆಯನ ಆತ್ಮಕ್ಕೆ ಶಾಂತಿ ಕೋರಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಚಿತ್ರದುರ್ಗದ 2,900 ಅರ್ಜಿಗಳಿಗೆ ಪರಿಹಾರ :
ಚಿತ್ರದುರ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಜಾಸೇವೆ ಇಲಾಖೆಯಿಂದ 3,737 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 2,900 ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಇದು ನಮ್ಮ ಬದ್ಧತೆ. ನಮಗಾಗಿ ಬದುಕುವುದು ಬರೀ ಜೀವನ, ಜನರಿಗಾಗಿ ಬದುಕುವುದು ಶ್ರೇಷ್ಠ ಜೀವನ. ಪ್ರಜಾಸೇವೆ ಎಂದರೆ ದಾನ-ಧರ್ಮವಲ್ಲ, ಅದು ಬದುಕಿನ ಹೊಣೆಗಾರಿಕೆ. ಸತ್ಯ, ಶಿಸ್ತು, ನೀತಿ ಹಾಗೂ ಪ್ರಾಮಾಣಿಕತೆಯೇ ಪ್ರಜಾಸೇವೆ ಎಂದು ತಿಳಿಸಿದರು.
ಜನರ ಸಂಕಷ್ಟಕ್ಕೆ ನೆರವಾಗುವುದೇ ಜಗತ್ತಿನ ಶ್ರೇಷ್ಠ ಧರ್ಮ. ಮರ ತಾನು ನೀಡುವ ಹಣ್ಣನ್ನು ತಾನೇ ತಿನ್ನುವುದಿಲ್ಲ. ಹರಿಯುವ ನದಿಯ ನೀರನ್ನು ನದಿಯೇ ಕುಡಿಯುವುದಿಲ್ಲ. ನಮ್ಮ ಬದುಕಿನಲ್ಲೂ ಸೇವಾ ಮನೋಭಾವ ಇರಬೇಕು ಎಂದರು.
ನಮ್ಮ ಸರ್ಕಾರ ರೈತರ 70 ವರ್ಷಗಳ ಕನಸನ್ನು ನನಸು ಮಾಡಿದೆ. ನಿಜಲಿಂಗಪ್ಪ ಅವರು ಕಂಡ ಭದ್ರಾ ಮೇಲ್ದಂಡೆ ಯೋಜನೆಯ ಕನಸನ್ನು ಎಸ್.ಎಂ. ಕೃಷ್ಣ ಅವರು ಜಾರಿಗೊಳಿಸಿದರು. ಛಲ ಬಿಡದೆ ಚಿತ್ರದುರ್ಗ ಜಿಲ್ಲೆಯ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಲಾಗಿದೆ ಎಂದು ಹೇಳಿದರು.
ನಾವು ಅಧಿಕಾರಕ್ಕೆ ಬಂದ ದಿನವೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಒಪ್ಪಿಗೆ ನೀಡಿದ್ದೆವು. ಈಗ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಅನುಷ್ಠಾನದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ. ದಾನ-ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದು ಹೇಳಿದ ಅವರು, ಅಮ್ಮನ ನೆನಪು ಪ್ರೀತಿಯ ಮೂಲ, ದೇವರ ನೆನಪು ಭಕ್ತಿಯ ಮೂಲ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ಜಲ ನಿಗಮದ ಅಡಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ 1,742 ಕೋಟಿ ರೂ. ವೆಚ್ಚದಲ್ಲಿ ಕೆರೆಗಳನ್ನು ತುಂಬಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ 16 ಕೆರೆಗಳನ್ನು ತುಂಬಿಸಲು 244 ಕೋಟಿ ರೂ. ನೀಡಲಾಗಿದೆ. ಕಳೆದ ತಿಂಗಳು ಐತಿಹಾಸಿಕ ಗೋನೂರು ಕೆರೆಯನ್ನು ತುಂಬಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ನಾಲ್ಕು ಜಿಲ್ಲೆಗಳ 13 ತಾಲ್ಲೂಕುಗಳ 367 ಕೆರೆಗಳತ್ತ ಭದ್ರಾ ಯೋಜನೆ ಹೆಜ್ಜೆ ಹಾಕುತ್ತಿದ್ದು, ಇದರಿಂದ ಸುಮಾರು 74.26 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಹಿರಿಯೂರು ನಗರದ ದಕ್ಷಿಣ ಭಾಗಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಮೊದಲ ಹಂತದ 100 ಕೋಟಿ ರೂ. ಮೊತ್ತದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಹಿರಿಯೂರು ತಾಲ್ಲೂಕಿನ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು 50 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಹಿರಿಯೂರು ಪಟ್ಟಣದಲ್ಲಿ 12.65 ಕೋಟಿ ರೂ. ವೆಚ್ಚದಲ್ಲಿ ಡಾ.ಬಾಬು ಜಗಜೀವನ ರಾಂ ಭವನ, ಛಲವಾದಿ ಭವನ ಹಾಗೂ ಭೋವಿ ಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿರಿಯೂರು ತಾಲ್ಲೂಕಿನ ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ ವಿವಿಧ ಮೂಲಸೌಕರ್ಯಗಳನ್ನು ಒದಗಿಸಲು 10 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿರಿಯೂರು ನಗರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಒಕ್ಕಲಿಗರ ಭವನ ನಿರ್ಮಾಣ ಕಾಮಗಾರಿಗೆ ಹಾಗೂ ಯುಜಿಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಧರ್ಮಪುರ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಧಾರ್ಮಿಕ ಕ್ಷೇತ್ರಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿ ರೂ. ಅನುದಾನ ನೀಡಲಾಗಿದೆ. 2026-27ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ 20 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು.






