ಬಿ.ಎಸ್.ಯಡಿಯೂರಪ್ಪ ಜೀವನ ಯುವಜನರಿಗೆ ಮಾದರಿ : ಕೇಂದ್ರ ಗೃಹ ಸಚಿವ ಅಮಿತ್ ಶಾ

ಚಿತ್ರದುರ್ಗ : ಯಡಿಯೂರಪ್ಪ ಅವರ 5 ದಶಕಗಳ ಸಾರ್ವಜನಿಕ ಜೀವನ, ಹೋರಾಟವು ಯುವಜನತೆಗೆ ಮಾದರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.
ಇಂದು ʼಬಿಎಸ್‍ವೈ ಅಭಿಮಾನೋತ್ಸವʼದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದರು. ‘ಕೆಂದಾವರೆ- ಕಮಲ ಅರಳಿದ ಕಥೆ’, ‘ಸದನ ಶಿಕಾರಿ- ಯಡಿಯೂರಪ್ಪನವರ ಗುಡುಗಿನ ನುಡಿಗಳು’ ಪುಸ್ತಕಗಳನ್ನು ಇದೇವೇಳೆ ಅವರು ಬಿಡುಗಡೆ ಮಾಡಿದರು.
ʼಇರುವ ರಸ್ತೆಯಲ್ಲೇ ಚಲಿಸುವವರು, ಹೊಸದಾಗಿ ಮಾರ್ಗದರ್ಶನ ಮಾಡುವವರು ಇರುತ್ತಾರೆ. ಯಡಿಯೂರಪ್ಪ ಅವರು ಮಾರ್ಗದರ್ಶನ ಮಾಡುವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಸಾಧಾರಣ ಕುಟುಂಬದಿಂದ ಬಂದವರು. ಅವರ ಇಚ್ಛಾಶಕ್ತಿ, ಸಂಘದ ಸಂಸ್ಕಾರ, ರಾಷ್ಟ್ರಭಕ್ತಿಯು ಅವರ ಜೀವನದುದ್ದಕ್ಕೂ ಮಾರ್ಗದರ್ಶನ ನೀಡಿದೆʼ ಎಂದು ತಿಳಿಸಿದರು.
ಬಸ್ ಸಿಗದಿದ್ದರೆ ಸೈಕಲ್‍ನಲ್ಲೇ ಹಳ್ಳಿಗೆ ತೆರಳಿ ಬಿಜೆಪಿಯನ್ನು ಸದೃಢವಾಗಿ ಕಟ್ಟಿದರು. ಸಾವಿರಾರು ಕಿಮೀ ಪಾದಯಾತ್ರೆ ಮಾಡಿ ರೈತರ ಪರವಾಗಿ ಹೋರಾಟ ಮಾಡಿದವರು. ಈ ಮೂಲಕ ರೈತ ನಾಯಕರಾಗಿ ಹೊರಹೊಮ್ಮಿದರು. ಇದಕ್ಕಾಗಿ ಅವರು ಜೈಲುವಾಸ ಅನುಭವಿಸಬೇಕಾಯಿತು ಎಂದು ಅಮಿತ್ ಶಾ ಹೇಳಿದರು.
ಪಶ್ಚಿಮ ಬಂಗಾಲದಲ್ಲಿ ಇಂದು ಬಿಜೆಪಿಯ ಮುಖ್ಯಮಂತ್ರಿಯ ಪದಗ್ರಹಣ ನಡೆದಿದೆ. ಇದೇ ದಿನ ಯಡಿಯೂರಪ್ಪನವರ 50 ವರ್ಷಗಳ ರಾಜಕೀಯ ಸೇವೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯುತ್ತಿದೆ. ವಿವೇಕಾನಂದರು, ಶ್ಯಾಮಪ್ರಸಾದ ಮುಖರ್ಜಿ ಮೊದಲಾದವರು ಹುಟ್ಟಿದ ನಾಡಿನಲ್ಲಿ ಹೊಸ ಶಕೆ ಆರಂಭವಾಗಿದೆ ಎಂದರು.
ಅಭಿಮಾನೋತ್ಸವದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅವರು ಜನಸೇವೆಯಲ್ಲಿ ಸಾರ್ಥಕ 50 ವರ್ಷದ ಸಾಧನೆಗಳ ವಿವರ ನೀಡಿದರು. ಬಿಎಸ್‍ವೈ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಗಣ್ಯರು, ಸ್ವಾಮೀಜಿಗಳು ಭಾಗವಹಿಸಿದ್ದರು.






