Canada | ಭಾರತೀಯ ಮೂಲದ ಯುವಕ ಗುಂಡೇಟಿಗೆ ಬಲಿ: ಗ್ಯಾಂಗ್ ವಾರ್ ಶಂಕೆ

Photo Credit : ndtv
ಬುರ್ನಬಿ (ಕೆನಡಾ): ಗುರುವಾರ ಬುರ್ನಬಿಯಲ್ಲಿ ನಡೆದ 28 ವರ್ಷದ ಭಾರತೀಯ ಮೂಲದ ಯುವಕನ ಹತ್ಯೆ ಮಾಡಲಾಗಿದೆ. ಇದು ಗ್ಯಾಂಗ್ ವಾರ್ ಆಗಿರಬಹುದು ಎಂದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಯುವಕನನ್ನು ವ್ಯಾಂಕೋವರ್ ನಿವಾಸಿ ದಿಲ್ ರಾಜ್ ಸಿಂಗ್ ಗಿಲ್ ಎಂದು ಗುರುತಿಸಲಾಗಿದ್ದು, ಆತ ಪೊಲೀಸರಿಗೆ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ಸುಮಾರು 5.30ರ ಕೆಲವೇ ಕ್ಷಣಗಳ ಮುಂಚೆ, ಕೆನಡಾ ವೇಯ 3700 ಬ್ಲಾಕ್ ಬಳಿ ಗುಂಡಿನ ದಾಳಿ ನಡೆದಿದೆ ಎಂಬ ಮಾಹಿತಿ ಬುರ್ನಬಿ ಆರ್ಸಿಎಂಪಿ ಫ್ರಂಟ್ ಲೈನ್ ಅಧಿಕಾರಿಗಳಿಗೆ ಲಭಿಸಿದೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪುರುಷನೊಬ್ಬ ಸಾವು–ಬದುಕಿನ ಹೋರಾಟ ನಡೆಸುತ್ತಿರುವುದು ಕಂಡು ಬಂದಿದೆ. ಜೀವ ರಕ್ಷಿಸಲು ಕೈಗೊಂಡ ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಇದಾದ ಕೆಲವೇ ಕ್ಷಣಗಳಲ್ಲಿ ಬುಕ್ಸ್ಟನ್ ಸ್ಟ್ರೀಟ್ನ 5000 ಬ್ಲಾಕ್ ಬಳಿ ಒಂದು ವಾಹನ ಪತ್ತೆಯಾಗಿದೆ. ಆ ವಾಹನಕ್ಕೂ ಗುಂಡಿನ ದಾಳಿಗೂ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಬ್ರಿಟಿಷ್ ಕೊಲಂಬಿಯಾದ ಬುರ್ನಬಿ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಮಗ್ರ ಹತ್ಯೆ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. “ಗಿಲ್ ಪೊಲೀಸರಿಗೆ ಪರಿಚಿತನಾಗಿದ್ದ ಹಾಗೂ ಈ ಗುಂಡಿನ ದಾಳಿ ಬಿಸಿ ಗ್ಯಾಂಗ್ ಘರ್ಷಣೆಯೊಂದಿಗೆ ಸಂಬಂಧ ಹೊಂದಿರುವಂತೆ ಕಾಣುತ್ತದೆ” ಎಂದು ಪ್ರಕಟನೆಯಲ್ಲಿ ಹೇಳಲಾಗಿದೆ.







