ಸಂಪತ್ತಿಗೊಂದು ಸಂಚಿನ ಸವಾಲ್!

ಚಿತ್ರ: ಬ್ರ್ಯಾಟ್
ನಿರ್ದೇಶನ: ಶಶಾಂಕ್
ನಿರ್ಮಾಣ: ಡಾಲ್ಫಿನ್ ಎಂಟರ್ಟೈನ್ಮೆಂಟ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಮನೀಷಾ ಕಂಡ್ಕೂರ್ ಮೊದಲಾದವರು
ಮಹಾದೇವ ಮಧ್ಯಮವರ್ಗದ ಕುಟುಂಬದಲ್ಲಿರುವ ಪ್ರಾಮಾಣಿಕ ತಂದೆ. ಆದರೆ ಆತನ ಸುಪುತ್ರ ದುಡ್ಡು ಮಾಡಲೆಂದೇ ಆರಿಸಿಕೊಳ್ಳುವುದು ಬೆಟ್ಟಿಂಗ್ ದಂಧೆ. ಇದು ಬ್ರ್ಯಾಟ್ ಚಿತ್ರದ ಒನ್‌ಲೈನ್ ಸ್ಟೋರಿ. ಆದರೆ ಮುಂದಿನದೆಲ್ಲ ಅನಿರೀಕ್ಷಿತ ತಿರುವಿನ ದಾರಿ.
ವೃತ್ತಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿರುವ ಮಹಾದೇವ ಯಾವತ್ತೂ ಲಂಚಕ್ಕೆ ಆಸೆ ಪಟ್ಟವನಲ್ಲ. ಇಂಥ ತೀರ್ಮಾನದಿಂದಾಗಿ ಅವರ ಕುಟುಂಬ ಮಧ್ಯಮ ಕ್ರಮಾಂಕದಿಂದ ಮೇಲೇರುವುದೇ ಇಲ್ಲ. ಆದರೆ ಶ್ರೀಮಂತಿಕೆಯ ಕನಸಿನೊಂದಿಗೆ ಬೆಳೆಯುವ ಪುತ್ರ ಕೃಷ್ಣನಿಗೆ ಹೇಗಾದರೂ ಮಾಡಿ ಬಲುಬೇಗ ದುಡ್ಡು ಮಾಡುವ ಕನಸು. ಅದಕ್ಕಾಗಿ ಆಯ್ದುಕೊಳ್ಳುವುದು ಕ್ರಿಕೆಟ್ ಬೆಟ್ಟಿಂಗ್ ಕ್ಷೇತ್ರ. ಇದಕ್ಕೆ ಕಾನೂನಿನ ಅನುಮತಿ ಇಲ್ಲ ಎನ್ನುವುದು ಗೊತ್ತಿದ್ದರೂ ಇದು ಷೇರು ಮಾರುಕಟ್ಟೆಯಂತೆ ಒಂದು ಬುದ್ಧಿವಂತಿಕೆಯ ಆಟ ಎಂದು ನಂಬಿರುವಾತ. ಕೃಷ್ಣನ ಈ ಕೃತ್ಯದಿಂದ ನಡೆಯುವ ದುರಂತಗಳಿಂದ ಬೇಸತ್ತ ಮಹಾದೇವ ಮನೆಯಿಂದಲೇ ಹೊರಗೆ ಕಳಿಸುತ್ತಾನೆ. ಪುತ್ರನ ವಿರುದ್ಧ ನಡೆಸುವ ಕಾನೂನು ಸಮರದ ಮಹಾ ತಿರುವುಗಳೇ ಬ್ರ್ಯಾಟ್ ಚಿತ್ರದ ಪ್ರಮುಖ ಆಕರ್ಷಣೆ.
ರಜನಿಕಾಂತ್ ನಟನೆಯ ‘ಜೈಲರ್’ ಸಿನೆಮಾ ನೋಡಿದ ಬಳಿಕ ಬಹುಶಃ ಇಂಥದೊಂದು ಕಥೆಗೆ ಸ್ಫೂರ್ತಿ ಸಿಕ್ಕಿರಬಹುದೇ ಎನ್ನುವ ಸಂದೇಹ ಮೂಡದೇ ಇರದು. ಅಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೇ ನಾಯಕ. ಆದರೆ ಇಲ್ಲಿ ಪ್ರಾಮಾಣಿಕ ಪೊಲೀಸ್ ತಂದೆಯಾಗಿ ಪೋಷಕ ಕಲಾವಿದ ಅಚ್ಯುತ್ ಕುಮಾರ್ ನಿರ್ವಹಿಸಿದ್ದಾರೆ. ಮಗನ ಒಳಿತಿಗಾಗಿ ಸದಾ ಸಿಡುಕಾಡುವ ತಂದೆಯ ಪಾತ್ರದಲ್ಲಿ ಪಿಎಚ್.ಡಿ. ಮಾಡಿದವರು ಅಚ್ಯುತ್. ಆದರೆ ಇಲ್ಲಿ ಇನ್ನೊಂದಷ್ಟು ಪ್ರಾಮುಖ್ಯತೆ ನೀಡಲು ನಿರ್ದೇಶಕರು ಪ್ರಯತ್ನಿಸಿರುವುದು ಕಾಣಿಸುತ್ತದೆ. ಸಂಪೂರ್ಣ ನೆಗೆಟಿವ್ ಆಗಿ ಹೋಗಬಹುದಾಗಿದ್ದ ಪುತ್ರ ಕೃಷ್ಣ ಯಾನೇ ಕ್ರಿಸ್ಟಿಯ ಪಾತ್ರಕ್ಕೆ ಪಾಸಿಟಿವ್ ಪುಷ್ಟಿ ನೀಡುವಲ್ಲಿ ಡಾರ್ಲಿಂಗ್ ಕೃಷ್ಣನ ಇಮೇಜ್ ಸಹಾಯ ಮಾಡಿದೆ. ಕಿಚ್ಚನ ‘ಕೋಟಿಗೊಬ್ಬ’ ಚಿತ್ರ ನೋಡಿದ ಬಳಿಕ ಒಂದೊಮ್ಮೆ ಈ ಕಥೆಯನ್ನು ಶಶಾಂಕ್ ಸುದೀಪ್‌ಗೆಂದು ರೆಡಿ ಮಾಡಿರುವ ಸಾಧ್ಯತೆಯೂ ಇದೆ. ಅದರೆ ತನ್ನ ಡಾನ್ಸ್ ಮತ್ತು ಡೈಲಾಗ್ ಡೆಲಿವರಿ ಮೂಲಕ ಕೃಷ್ಣ ಇದು ತನ್ನದೇ ಚಿತ್ರ ಎಂದು ಸಾಬೀತು ಮಾಡಿದ್ದಾರೆ.
ಚಿತ್ರಕಥೆಯ ವಿಚಾರಕ್ಕೆ ಬಂದರೆ ಶಶಾಂಕ್ ತಮ್ಮ ಹಿಂದಿನ ಶೈಲಿಯನ್ನು ಮುರಿದಿದ್ದಾರೆ. ಸಂಪೂರ್ಣವಾಗಿ ನಾಯಕನಿಗೆ ಪ್ರಾಧಾನ್ಯತೆ ನೀಡಿ ಬರೆಸಿದ್ದಾರೆ. ಆದರೂ ಕ್ರಿಕೆಟ್ ಬೆಟ್ಟಿಂಗ್ ಮಧ್ಯೆ ನಾಯಕಿ ಮನೀಷಾಗೆ ಸ್ಕೋರ್ ಮಾಡುವ ಅವಕಾಶ ಕೊಟ್ಟಿದ್ದಾರೆ. ನವ ನಟಿಯ ಮುಖದಲ್ಲಿ ಬಡತನದ ಆತಂಕ ಮತ್ತು ಸಿರಿತನದ ಆಕಾಂಕ್ಷೆ ಮೂಡಿಸುವಲ್ಲಿ ಗೆದ್ದಿದ್ದಾರೆ. ಮತ್ತೋರ್ವ ನಾಯಕಿಗೆ ನಾಯಕನಲ್ಲಿ ಸಾಧನೆಯ ಕಿಡಿ ಸೃಷ್ಟಿಸುವ ಅವಕಾಶ ನೀಡಿದ್ದಾರೆ. ತಾಯಿ ಪಾತ್ರ ಮಾಡಿರುವ ಮಾನಸಿ ಸುಧೀರ್ ಕೆಲವೇ ದೃಶ್ಯಗಳಿಗಷ್ಟೇ ಸೀಮಿತ. ಆದರೆ ಅಷ್ಟರಲ್ಲೇ ಪತಿಯ ಮೇಲಿನ ಗೌರವ ಮತ್ತು ಮಗನ ಮೇಲಿನ ಮಮತೆಯನ್ನು ಬಹಿರಂಗಗೊಳಿಸಿದ್ದಾರೆ.
ಬೆಟ್ಟಿಂಗ್ ದಂಧೆಯ ಮೂಲ ಸೂತ್ರಧಾರ ಡಾಲರ್ ಮಣಿ. ಡ್ರ್ಯಾಗನ್ ಮಂಜು ನಟನೆಯಲ್ಲಿ ಈ ಪಾತ್ರದ ಎಂಟ್ರಿ ಅಕ್ಷರಶಃ ಚಿತ್ರದ ತೂಕ ಹೆಚ್ಚಿಸುತ್ತದೆ. ಆತನ ಕ್ರೌರ್ಯ ಮತ್ತು ಇಂಗ್ಲಿಷ್ ಮೋಹದೊಂದಿಗೆ ಒಂದು ಆಕರ್ಷಕ ಪಾತ್ರವನ್ನೇ ಕಟ್ಟಿ ಕೊಡಲಾಗಿದೆ.
ಮಣಿಯೊಂದಿಗೆ ಕೈ ಜೋಡಿಸುವ ಪೊಲೀಸ್ ಅಧಿಕಾರಿಯಾಗಿ ರಮೇಶ್ ಇಂದಿರಾ ಕಾಣಿಸಿದ್ದಾರೆ. ಭ್ರಷ್ಟನಾದರೂ ತನ್ನ ನಗುವಲ್ಲೇ ಪ್ರೇಕ್ಷಕರಿಗೆ ಇಷ್ಟವಾಗಿ ಬಿಡುವ ಶೈಲಿಯನ್ನು ರಮೇಶ್ ಇಲ್ಲಿಯೂ ಮುಂದುವರಿಸಿದ್ದಾರೆ.
ಸದಾ ತನ್ನ ಸಿನೆಮಾಗಳಲ್ಲಿ ಸಂದೇಶಕ್ಕೆ ಪ್ರಾಮುಖ್ಯತೆ ನೀಡುವ ಶಶಾಂಕ್ ಈ ಬಾರಿ ಸ್ವಲ್ಪ ಒರಟು ಮಾರ್ಗ ಅನುಸರಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಕೂಡ ಗುನುಗುವಂತಿವೆ. ಆದರೆ ಐಟಂ ಸಾಂಗ್ ತುರುಕಬೇಕಾದ ಅಗತ್ಯ ಸೃಷ್ಟಿಯಾಗಿದ್ದು ಮಾತ್ರ ವಿಪರ್ಯಾಸ. ಅದರಲ್ಲೂ ಗಂಗಿ ಗೀತೆ ಬಿಜಿಎಂನಲ್ಲಿ ಚಂದನ್ ಶೆಟ್ಟಿಯ ‘ಕರಾಬು’ ಟ್ಯೂನ್ ನೆನಪಿಸುತ್ತದೆ. ಖಳನಿಂದ ಹಿಡಿದು ಪ್ರತಿಯೊಂದು ಪಾತ್ರಗಳ ವಸ್ತ್ರಶೈಲಿಯನ್ನು ಸಿದ್ಧಗೊಳಿಸಿರುವ ರೀತಿ ಮೆಚ್ಚುವಂಥದ್ದು. ಸಾಹಸ ಸನ್ನಿವೇಶಗಳು ಮತ್ತು ಅಭಿಲಾಷ್ ಛಾಯಾಗ್ರಹಣಕ್ಕೂ ಪ್ರಶಂಸೆ ಸಲ್ಲಬೇಕು.
ಕೃಷ್ಣ ಎನ್ನುವ ಹೆಸರಿಗೆ ತಕ್ಕಂತೆ ಚಿತ್ರದ ನಾಯಕನಿಂದ ನ್ಯಾಯದ ಪರವಾದ ವಂಚನೆ ಮಾಡಿಸಿದ್ದಾರೆ. ಕೆಲವೊಂದು ಘಟನೆ ನಂಬಲು ಕಷ್ಟವೆನಿಸಬಹುದು. ಒಂದು ವೇಳೆ ನಡೆದರೂ ಒಂದಲ್ಲ ಒಂದು ದಿನ ಕಾನೂನಿನ ಕೈಗೆ ಸಿಕ್ಕಿ ಬೀಳುವುದು ಖಚಿತ ಎನ್ನುವ ಎಚ್ಚರಿಕೆ ಪ್ರೇಕ್ಷರಲ್ಲಿರಬೇಕು! ಆದರೆ ಒಂದು ಕಮರ್ಷಿಯಲ್ ಚಿತ್ರವಾಗಿ ನೋಡಿ ಎಂಜಾಯ್ ಮಾಡಿ ಮರೆಯಲು ಯಾವ ಅಡ್ಡಿಯೂ ಇಲ್ಲ.







