ನಾಪತ್ತೆಯಾದ ಬಾಲಕಿ, ಇಬ್ಬರು ತಂದೆಯರ ನೋವು, 23 ವರ್ಷಗಳ ರಹಸ್ಯ: ಹೇಗಿದೆ 'ಹೇಲ್ ಮೇರಿ' ?

ಮಲಯಾಳಂ ಚಿತ್ರರಂಗದವರು ಥ್ರಿಲ್ಲರ್ ಸಿನಿಮಾ ಮಾಡೋಕೆ ಶುರು ಮಾಡಿದರೆ, ಪ್ರೇಕ್ಷಕರ ಮೆದುಳಿಗೆ ಕೆಲಸ ಗ್ಯಾರಂಟಿ! 'ಹೇಲ್ ಮೇರಿ' (Hail Mary) ಕೂಡ ಅಂತಹದ್ದೇ ಒಂದು ಸಿನಿಮಾ. ಇಲ್ಲಿ ಸಸ್ಪೆನ್ಸ್ ಇದೆ, ಭಾವನಾತ್ಮಕತೆಯಿದೆ, ಅಪರಾಧ ಜಗತ್ತು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮನಸ್ಸನ್ನು ಕಾಡುವ ಮಾನವೀಯ ಕಥೆಯೊಂದಿದೆ.
ವಿಷ್ಣು ರವಿಕುಮಾರ್ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ, ಜಿ.ಆರ್. ಇಂದುಗೋಪನ್ ಅವರ 'ಅಂಬಿಳಿಮೋಳ್ ತಿರೋಧನಂ' ಕಾದಂಬರಿಯನ್ನು ಆಧರಿಸಿದೆ. ಮಾರ್ಟಿನ್ ಪ್ರಕ್ಕಾಟ್ ಮತ್ತು ಡಾ. ನೀರಜ್ ರಾಜನ್ ಚಿತ್ರಕಥೆ ಬರೆದಿದ್ದಾರೆ.
ಕಥೆಯ ಬಗ್ಗೆ ಹೇಳುವುದಾದರೆ, ಕೊಚ್ಚಿಯಲ್ಲಿ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡುವ ಮಧು (ಕುಂಚಾಕೊ ಬೋಬನ್), ಆ್ಯನಿ ಮತ್ತು ಆಕೆಯ ಮಗಳು ಹನ್ನಾ ಜೊತೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಿರುತ್ತಾನೆ. ಆದರೆ, 23 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮರಿಯಾ ಎಂಬ ಬಾಲಕಿಯ ಪ್ರಕರಣ ಮತ್ತೆ ತನಿಖೆಗೆ ಒಳಪಡುತ್ತದೆ. ಆ ಪ್ರಕರಣದಲ್ಲಿ ಅನುಮಾನಕ್ಕೊಳಗಾಗಿದ್ದ ಮಧುವಿನ ಬದುಕು ಇದ್ದಕ್ಕಿದ್ದಂತೆ ತಲೆಕೆಳಗಾಗುತ್ತದೆ.
ಮರಿಯಾಗೆ ನಿಜವಾಗಿಯೂ ಏನಾಯಿತು? ಮಧುವಿಗೂ ಈ ಪ್ರಕರಣಕ್ಕೂ ಏನು ಸಂಬಂಧ? ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಮಧು ಯಾವ ಹಂತಕ್ಕೆ ಹೋಗುತ್ತಾನೆ?
ಇಲ್ಲಿಂದ ಶುರುವಾಗುವುದೇ ಸಿನಿಮಾದ ನಿಜವಾದ ಥ್ರಿಲ್!
►ಕಥೆ ಹೇಳಲ್ಲ, ಆದರೆ ಫಸ್ಟ್ ಹಾಫ್ ನ ಸಸ್ಪೆನ್ಸ್ ಬಿಲ್ಡಪ್ ಮಾತ್ರ ಮರೆಯಲಾಗದ್ದು
ನಟನೆಯ ವಿಚಾರಕ್ಕೆ ಬಂದರೆ, ಕುಂಚಾಕೊ ಬೋಬನ್ ಅಕ್ಷರಶಃ ಸಿನಿಮಾದ ಜೀವಾಳ. ಆತಂಕ, ಅಸಹಾಯಕತೆ, ಭಯ ಮತ್ತು ಸತ್ಯವನ್ನು ಹುಡುಕುವ ಹಠವನ್ನು ತಮ್ಮ ಮುಖಭಾವಗಳ ಮೂಲಕವೇ ಅದ್ಭುತವಾಗಿ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಬಿ ಪಾತ್ರದಲ್ಲಿ ಸೂರಜ್ ವೆಂಜಾರಮೂಡು ಅವರ ನಟನೆ ನಿಜಕ್ಕೂ ಅದ್ಭುತವೆನಿಸುತ್ತದೆ! ಮಗಳನ್ನು ಕಳೆದುಕೊಂಡ ತಂದೆಯ ನೋವನ್ನು ಅತಿಯಾದ ಸಂಭಾಷಣೆಗಳಿಲ್ಲದೆ, ತಮ್ಮ ಮೌನ ಮತ್ತು ಕಣ್ಣೋಟದ ಮೂಲಕವೇ ಪ್ರೇಕ್ಷಕರಿಗೆ ತಲುಪಿಸುತ್ತಾರೆ. ಅವರಿಗೆ ಸಿನಿಮಾದಲ್ಲಿ ಇನ್ನಷ್ಟು ಜಾಗ ನೀಡಬಹುದಿತ್ತು ಅನ್ನಿಸುತ್ತದೆ.
ಆ್ಯನಿ ಪಾತ್ರದಲ್ಲಿ ಅನು ಸಿತಾರಾ ಕೂಡ ಸಹಜವಾಗಿ ಅಭಿನಯಿಸಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಜೇಕ್ಸ್ ಬಿಜಾಯ್ ಅವರ ಹಿನ್ನೆಲೆ ಸಂಗೀತ ಕಿವಿಗೆ ಆಹ್ಲಾದವೆನಿಸುತ್ತದೆ!
ಇನ್ನು ಸಂಗೀತ ನಿರ್ದೇಶಕ ಜೇಕ್ಸ್ ಬಿಜಾಯ್ ಬಗ್ಗೆ ಹೇಳಲೇಬೇಕು. 'ರಣಂ', 'ಅಯ್ಯಪ್ಪನುಂ ಕೋಶಿಯುಂ', 'ಇರಟ್ಟ', 'ಪೋರ್ ತೊಝಿಲ್', 'ತುಡರುಂ', 'ಲೋಕಾಃ' ಮುಂತಾದ ಸಿನಿಮಾಗಳಲ್ಲಿ ತಮ್ಮ ಅದ್ಭುತ ಹಿನ್ನೆಲೆ ಸಂಗೀತದ ಮೂಲಕ ಛಾಪು ಮೂಡಿಸಿರುವ ಜೇಕ್ಸ್, 'ಹೇಲ್ ಮೇರಿ'ಯಲ್ಲೂ ತಮ್ಮ ಮ್ಯಾಜಿಕ್ ಮುಂದುವರಿಸಿದ್ದಾರೆ. ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುವುದರ ಜೊತೆಗೆ, ಮುಂದೇನಾಗಬಹುದು ಎಂಬ ಆತಂಕವನ್ನು ಪ್ರೇಕ್ಷಕರಲ್ಲಿ ಜೀವಂತವಾಗಿಡುತ್ತದೆ.
ರೋಬಿ ವರ್ಗೀಸ್ ರಾಜ್ ಅವರ ಛಾಯಾಗ್ರಹಣ ಸಿನಿಮಾದ ನಿಗೂಢ ವಾತಾವರಣಕ್ಕೆ ಪೂರಕವಾಗಿದೆ. ಲೈಟಿಂಗ್, ಕ್ಯಾಮೆರಾ ಚಲನೆ, ಫ್ರೇಮಿಂಗ್ ಹಾಗೂ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಮನಸ್ಸಿಗೆ ತಟ್ಟುತ್ತದೆ. ಚಿತ್ರಕ್ಕೆ ಪೂರಕ ದೃಶ್ಯಗಳನ್ನು ಕೇವಲ ಸುಂದರವಾಗಿ ತೋರಿಸುವುದಷ್ಟೇ ಅಲ್ಲದೆ, ಕಥೆಯ ನಿಗೂಢತೆ ಮತ್ತು ಪಾತ್ರಗಳ ಮನಸ್ಥಿತಿಯನ್ನು ದೃಶ್ಯಗಳ ಮೂಲಕವೇ ಅವರು ಕಟ್ಟಿಕೊಟ್ಟಿದ್ದಾರೆ.
ಪ್ರತಿ ಫ್ರೇಮ್ ಕೂಡ ಕಥೆಯ ತೀವ್ರತೆಯನ್ನು ಹೆಚ್ಚಿಸುವಂತಿದೆ. ಅದೇ ರೋಬಿ ಅವರ ದೃಶ್ಯಕಥಾನಕದ ಶಕ್ತಿ.
ಚಮನ್ ಚಾಕೊ ಅವರ ಸಂಕಲನ ಮೊದಲಾರ್ಧದಲ್ಲಿ ಕಥೆಯ ಹಿಡಿತವನ್ನು ಅತ್ಯುತ್ತಮವಾಗಿ ಕಾಪಾಡಿಕೊಂಡಿದೆ. 'ಕಳ', '2018', 'RDX', 'ಸೂಕ್ಷ್ಮದರ್ಶಿನಿ', 'ಆಫೀಸರ್ ಆನ್ ಡ್ಯೂಟಿ' ಹಾಗೂ 'ಲೋಕಾಃ' ಸಿನಿಮಾಗಳ ಮೂಲಕ ತಮ್ಮ ಸಂಕಲನದ ಪ್ರತಿಭೆಯನ್ನು ಸಾಬೀತುಪಡಿಸಿರುವ ಚಮನ್ ಚಾಕೊ (Chaman Chakko), 'ಹೇಲ್ ಮೇರಿ'ಯ ಮೊದಲಾರ್ಧದಲ್ಲಿ ಸಸ್ಪೆನ್ಸ್ ಅನ್ನು ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಇನ್ನು ಚಮನ್ ಚಾಕೊ ಅವರ ಸಂಕಲನದ ಬಗ್ಗೆ ವಿಶೇಷವಾಗಿ ಹೇಳಬೇಕು. ಚಿತ್ರದ ಟೈಟಲ್ ರಿವೀಲ್ ಮತ್ತು ಇಂಟರ್ವಲ್ ರಿವೀಲ್ ಎರಡೂ ನೆಕ್ಸ್ಟ್ ಲೆವೆಲ್ನಲ್ಲಿವೆ. ದೃಶ್ಯಗಳ ನಡುವಿನ ಸಂಯೋಜನೆ, ನಿಖರವಾದ ಕಟ್ಸ್ ಹಾಗೂ ಸರಿಯಾದ ಸಮಯಕ್ಕೆ ಸಸ್ಪೆನ್ಸ್ ಬಹಿರಂಗಪಡಿಸುವ ರೀತಿ ಅದ್ಭುತವಾಗಿದೆ. ಜೇಕ್ಸ್ ಬಿಜಾಯ್ ಅವರ ಹಿನ್ನೆಲೆ ಸಂಗೀತ ಮತ್ತು ಚಮನ್ ಚಾಕೊ ಅವರ ಸಂಕಲನ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದ್ದು, ಇಂಟರ್ವಲ್ ಬ್ಲಾಕ್ ಅಕ್ಷರಶಃ ರೋಮಾಂಚನ ಮೂಡಿಸುತ್ತದೆ. ಆದರೆ, ಕ್ಲೈಮ್ಯಾಕ್ಸ್ ನ ಸುದೀರ್ಘ ಆ್ಯಕ್ಷನ್ ದೃಶ್ಯಗಳಿಗೆ ಸ್ವಲ್ಪ ಕತ್ತರಿ ಹಾಕಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು.
ಆ್ಯಕ್ಷನ್ ದೃಶ್ಯಗಳ ಕ್ಯಾಮೆರಾ ಕಲೆ, ಕೊರಿಯೋಗ್ರಫಿ ಮತ್ತು ಮೇಕಿಂಗ್ ಅದ್ಭುತವಾಗಿದೆ. ಸಾಹಸ ದೃಶ್ಯಗಳ ಸೀಕ್ವೆನ್ಸ್ ಗಳು ಸಾಕಷ್ಟು ರಿಯಲಿಸ್ಟಿಕ್ ಆಗಿ ಮೂಡಿಬಂದಿವೆ. ಆದರೆ, ಕ್ಲೈಮ್ಯಾಕ್ಸ್ ನ ಫೈಟಿಂಗ್ ದೃಶ್ಯವನ್ನು ಸ್ವಲ್ಪ ಕಡಿತಗೊಳಿಸಿದ್ದರೆ ಸಿನಿಮಾದ ತೀವ್ರತೆ ಮತ್ತು ಭಾವನಾತ್ಮಕ ಪರಿಣಾಮ ಇನ್ನಷ್ಟು ಹೆಚ್ಚುತ್ತಿತ್ತು.
ಸಿನಿಮಾದ ಸೆಕೆಂಡ್ ಹಾಫ್ ನಕಾರಾತ್ಮಕವಾಗಿದೆ. ಅನಗತ್ಯವಾಗಿ ಸುದೀರ್ಘಗೊಳಿಸಿರುವ ಫೈಟಿಂಗ್ ಸೀಕ್ವೆನ್ಸ್ ಗಳು, ಕೆಲವು ಅನುಕೂಲಕರ ತಿರುವುಗಳು ಹಾಗೂ ಅತಿಯಾದ ಸಿನಿಮೀಯ ಅಂಶಗಳು ಕಥೆಯ ಸಹಜತೆಯನ್ನು ಕುಂದಿಸುತ್ತವೆ.
ಒಂದು ಹಂತದಲ್ಲಿ ಮಿಸ್ಟರಿ ಥ್ರಿಲ್ಲರ್ ನೋಡುತ್ತಿದ್ದೇವೋ ಅಥವಾ ಕಮರ್ಷಿಯಲ್ ಆ್ಯಕ್ಷನ್ ಸಿನಿಮಾ ನೋಡುತ್ತಿದ್ದೇವೋ ಎಂಬ ಅನುಮಾನ ಮೂಡುತ್ತದೆ. ಆ್ಯಕ್ಷನ್ ದೃಶ್ಯಗಳಿಗೆ ಕತ್ತರಿ ಹಾಕಿ, ಪಾತ್ರಗಳ ಭಾವನಾತ್ಮಕ ಸಂಘರ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರೆ ಸಿನಿಮಾ ಮತ್ತಷ್ಟು ಪರಿಣಾಮಕಾರಿಯಾಗುತ್ತಿತ್ತು.
ಆದರೂ, ಚೊಚ್ಚಲ ನಿರ್ದೇಶನದಲ್ಲೇ ವಿಷ್ಣು ರವಿಕುಮಾರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
'ಹೇಲ್ ಮೇರಿ' ಕೇವಲ ನಾಪತ್ತೆಯಾದ ಬಾಲಕಿಯ ಹುಡುಕಾಟವಲ್ಲ. ಅದು ಪಿತೃತ್ವ, ಪ್ರೀತಿ, ಕಳೆದುಕೊಳ್ಳುವ ಭಯ ಮತ್ತು ಸತ್ಯಕ್ಕಾಗಿ ನಡೆಸುವ ಹೋರಾಟದ ಕಥೆ.
ಒಟ್ಟಿನಲ್ಲಿ, ಇದು ಪರ್ಫೆಕ್ಟ್ ಥ್ರಿಲ್ಲರ್ ಅಲ್ಲ. ಆದರೆ, ಅದ್ಭುತ ನಟನೆ, ಪರಿಣಾಮಕಾರಿ ಹಿನ್ನೆಲೆ ಸಂಗೀತ ಮತ್ತು ಕುತೂಹಲಕಾರಿ ಕಥೆಗಾಗಿ ಖಂಡಿತವಾಗಿಯೂ ನೋಡಬಹುದಾದ ಸಿನಿಮಾ.






