ʼ3 ಈಡಿಯಟ್ಸ್ʼ ಸೀಕ್ವೆಲ್ ದೃಢಪಡಿಸಿದ ಆಮಿರ್ ಖಾನ್; ಸೀಕ್ವೆಲ್ ನ ವಿಶೇಷತೆಯೇನು?

Photo Credit : X
2009ರಲ್ಲಿ ತೆರೆಕಂಡಿದ್ದ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಹಾಸ್ಯಪ್ರಧಾನ ‘3 ಈಡಿಯಟ್ಸ್’ ಚಿತ್ರದ ಸೀಕ್ವೆಲ್ ಬರುತ್ತದೆ ಎನ್ನುವ ದೊಡ್ಡ ಸುದ್ದಿಯನ್ನು ಆಮಿರ್ ಖಾನ್ ಅಭಿಮಾನಿಗಳಿಗೆ ನೀಡಿದ್ದಾರೆ.
ಬಾಲಿವುಡ್ ನ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾದ ‘3 ಈಡಿಯಟ್ಸ್’ ಅಧಿಕೃತವಾಗಿ ಮರಳುತ್ತಿದೆ. ಆಮಿರ್ ಖಾನ್ ಅವರು ‘3 ಈಡಿಯಟ್ಸ್’ ಸೀಕ್ವೆಲ್ ಸಿದ್ಧಪಡಿಸುತ್ತಿರುವುದನ್ನು ದೃಢಪಡಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ವರ್ಷಗಳೇ ಕಳೆದರೂ ಆ ಚಿತ್ರದ ಕ್ರೇಝ್ ಇನ್ನೂ ಇದೆ.
ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಇದೀಗ ಸೀಕ್ವೆಲ್ ನಲ್ಲಿ ಮೂರು ಮಂದಿ ನಾಯಕನಟರು ಮೊದಲ ಭಾಗ ಬಿಡುಗಡೆಯಾದ ದಶಕಗಳ ನಂತರದ ಕತೆಯಲ್ಲಿ ಮರಳಿ ಬರುತ್ತಿದ್ದಾರೆ. ಆದರೆ ಪಾತ್ರವರ್ಗ ಅದೇ ಇರುತ್ತದೆಯೇ ಎನ್ನುವ ಬಗ್ಗೆ ದೃಢಪಟ್ಟಿಲ್ಲ.
2009ರಲ್ಲಿ ತೆರೆಕಂಡಿದ್ದ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಕಾಮಿಡಿ ಜಾನರ್ ನ ‘3 ಈಡಿಯಟ್ಸ್’ ಚಿತ್ರದ ಸೀಕ್ವೆಲ್ ಬರುತ್ತದೆ ಎನ್ನುವ ಸುದ್ದಿ ಬಹಳ ಸಮಯದಿಂದ ಚರ್ಚೆಯಲ್ಲಿದೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಇದೀಗ ಆಮಿರ್ ಖಾನ್ ದೊಡ್ಡ ಸುದ್ದಿಯನ್ನು ನೀಡಿ ಅಭಿಮಾನಿಗಳಿಗೆ ಸಂತಸ ತಂದಿದ್ದಾರೆ.
‘ಅಮರ್ ಉಜಾಲ’ ಜತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು ‘3 ಈಡಿಯಟ್ಸ್’ ಹೇಗೆ ಮಾಡಬಹುದು ಎಂದು ವಿವರಿಸಿದ್ದಾರೆ. “ರಾಜ್ಕುಮಾರ್ ಹಿರಾನಿ ಈಗಾಗಲೇ ತನಗೆ ಸೀಕ್ವೆಲ್ ಹೇಗಿರುತ್ತದೆ ಎನ್ನುವುದನ್ನು ವಿವರಿಸಿದ್ದಾರೆ” ಎಂದು ಆಮಿರ್ ಖಾನ್ ಹೇಳಿದ್ದಾರೆ.
“ರಾಜ್ ಕುಮಾರ್ ಹಿರಾನಿ ‘3 ಈಡಿಯಟ್ಸ್’ ಸೀಕ್ವೆಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕತೆ ಕೇಳಿದ್ದಾರೆ. ಚೆನ್ನಾಗಿದೆ ಎಂದು ಅನಿಸುತ್ತದೆ. ಅದರಲ್ಲಿ ಮೊದಲ ಭಾಗದಲ್ಲಿರುವ ಕತೆಯಂತಹುದೇ ಹಾಸ್ಯವಿದೆ. ಆದರೆ ಅಸಹಜವಾದ ಕತೆ ಇದೆ. ಮೊದಲ ಭಾಗದಲ್ಲಿದ್ದ ರಾಂಚೋ, ಫರ್ಹಾನ್ ಮತ್ತು ರಾಜು ಅವರ ಜೀವನ ಹತ್ತು ವರ್ಷಗಳ ನಂತರ ಹೇಗಿರಲಿದೆ ಎಂದು ತೋರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಆಮೀರ್ ತಮ್ಮ ಐಕಾನಿಕ್ ಪಾತ್ರವಾದ “ಫುನ್ಸುಖ್ ವಾಂಗ್ಡು’ ಆಗಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. “ಶೀಘ್ರದಲ್ಲೇ ನಾನು ಕೆಲಸ ಮಾಡಲಿರುವ ಸಿನಿಮಾಗಳಲ್ಲಿ ಇದೂ ಒಂದು. ಇದರಲ್ಲಿ ಸುಂದರ ಕತೆ ಇದೆ ಮತ್ತು ಅಭಿಜಾತ್ ಮತ್ತು ರಾಜು ಕತೆಯನ್ನು ಚೆನ್ನಾಗಿ ಬರೆದಿದ್ದಾರೆ. ಹೀಗಾಗಿ ಅದರಲ್ಲಿ ನಟನೆಗಾಗಿ ಎದಿರು ನೋಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.
ಅದೇ ಹಾಸ್ಯ, ಜೀವನದ ಹೊಸ ಮಜಲು:
ಸಿನಿಮಾದಲ್ಲಿ ಮೂಲ ಕತೆಯನ್ನೇ ಮುಂದುವರಿಸಲಾಗುವುದು ಎಂದು ಆಮೀರ್ ಖಾನ್ ಹೇಳಿದ್ದಾರೆ. ಅಸಹಜವಾದ ಕತೆಯಲ್ಲಿ ಮೂಲ ಸಿನಿಮಾದ ಹಾಸ್ಯ ಶೈಲಿಯನ್ನು ಉಳಿಸಿಕೊಳ್ಳಲಾಗಿದೆ. ಮೊದಲ ಭಾಗದಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯ ಸುತ್ತ ಹಾಸ್ಯ, ಸ್ನೇಹ ಮತ್ತು ಸಾಮಾಜಿಕ ಜೀವನವನ್ನು ಸಮತೋಲಿತವಾಗಿ ವರ್ಣಿಸಲಾಗಿತ್ತು. 10 ವರ್ಷಗಳ ನಂತರದ ಕತೆಯಲ್ಲಿ ಅನೇಕ ಸಾಧ್ಯತೆಗಳಿವೆ. ವೃತ್ತಿ ಒತ್ತಡಗಳು, ಮದುವೆ, ಮಕ್ಕಳ ಪಾಲನೆ, ಸುಸ್ತಾಗುವುದು, ಯಶಸ್ಸು ವರ್ಸಸ್ ಪೂರೈಸುವಿಕೆ ಮತ್ತು ಯುವಕಲ್ಪನೆಗಳು ಪ್ರೌಢಾವಸ್ಥೆಯಲ್ಲಿ ಹೇಗೆ ಬದುಕುಳಿಯುತ್ತವೆ” ಎನ್ನುವ ಸುತ್ತ ಕತೆ ಇರುವ ಸಾಧ್ಯತೆಯಿದೆ.
2025ರಲ್ಲಿ ರಾಜು ರಸ್ತೋಗಿ ಪಾತ್ರ ನಿರ್ವಹಿಸಿದ ನಟ ಶರ್ಮನ್ ಜೋಶಿ ಅವರು ಸೀಕ್ವೆಲ್ ಊಹಾಪೋಹಗಳು ಅಂತಿಮವಾಗಿ ನಿಜವಾಗಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದರು. “ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ‘3 ಈಡಿಯಟ್ಸ್’ ಸೀಕ್ವೆಲ್ ಬರುತ್ತದೆ ಎಂದು ಊಹಾಪೋಹ ಹರಡಿತ್ತು. ಕಳೆದ ಬಾರಿ ವರದಿಗಳು ಬಂದಾಗ ಪ್ರಚಾರಾಭಿಯಾನವಾಗಿತ್ತು. ಈ ಬಾರಿ ನಿಜ ಸುದ್ದಿ ಎಂದು ನಂಬಿದ್ದೇನೆ” ಎಂದು ಹೇಳಿದ್ದಾರೆ.
ವಿಧು ವಿನೋದ್ ಚೋಪ್ರಾ ನಿರ್ಮಾಣದಲ್ಲಿ 2009ರಲ್ಲಿ ಬಿಡುಗಡೆಯಾದ ‘3 ಈಡಿಯಟ್ಸ್’ ಸಿನಿಮಾಗೆ ರಾಜ್ಕುಮಾರ್ ಹಿರಾನಿ ಮತ್ತು ಅಭಿಜಿತ್ ಜೋಶಿ ಜೊತೆಯಾಗಿ ಕತೆ ಬರೆದಿದ್ದಾರೆ. ಸಿನಿಮಾದಲ್ಲಿ ಆಮೀರ್ ಖಾನ್, ಆರ್ ಮಾಧವನ್ ಮತ್ತು ಶರ್ಮನ್ ಜೋಶಿ ಜೊತೆಗೆ ಕರೀನಾ ಕಪೂರ್, ಬೋಮನ್ ಇರಾನಿ, ಮೋನಾ ಸಿಂಗ್ ಮತ್ತು ಓಮಿ ವೈದ್ಯ ನಟಿಸಿದ್ದಾರೆ.
ಇದೀಗ ಅಧಿಕೃತವಾಗಿ ಘೋಷಣೆಯಾದ ಮೇಲೆ ಸೀಕ್ವೆಲ್ನ ಪಾತ್ರವರ್ಗ ಹೇಗಿರಲಿದೆ ಎನ್ನುವ ಕುತೂಹಲ ಜನರಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.






