ನಟ ಆಂಗಸ್ ಕ್ಲೌಡ್ ನಿಧನ; ಔಷಧಿ 'ಓವರ್ಡೋಸ್'ನಿಂದ ಸಾವನ್ನಪ್ಪಿರುವ ಶಂಕೆ

ಆಂಗಸ್ ಕ್ಲೌಡ್ (Photo: Twitter/@PopBase)
ನ್ಯೂಯಾರ್ಕ್: ಎಚ್ಬಿಒ ವಾಹಿನಿಯ ಜನಪ್ರಿಯ ಸೀರೀಸ್ “ಯುಫೋರಿಯಾ” ಮೂಲಕ ಜನಪ್ರಿಯತೆಯ ತುತ್ತತುದಿಗೇರಿದ್ದ ಯುವ ನಟ ಆಂಗಸ್ ಕ್ಲೌಡ್ ತಮ್ಮ 25ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಯುವ ನಟನ ಸಾವಿನ ಕಾರಣ ಔಷಧಿಯ ಓವರ್ಡೋಸ್ ಆಗಿರಬಹುದು ಎಂದು ಶಂಕಿಸಲಾಗಿದೆ. ಸಾಕಷ್ಟು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕ್ಲೌಡ್ ಅವರ ತಂದೆ ಒಂದು ವಾರದ ಹಿಂದೆಯಷ್ಟೇ ನಿಧನರಾಗಿದ್ದರಿಂದ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದಿರಬಹುದು ಎಂದು ಹೇಳಲಾಗಿದೆ.
ಪೊಲೀಸರು ತನಿಖೆ ನಡೆಸುತ್ತಿದ್ದು ಕ್ಲೌಡ್ ಅವರ ಸಾವಿಗೆ ನಿಖರ ಕಾರಣವೇನೆಂದು ತನಿಖೆ ನಂತರ ತಿಳಿದು ಬರಲಿದೆ. ಔಷಧಿ ಓವರ್ಡೋಸ್ ಆಗಿರಬಹುದೆಂಬ ಶಂಕೆಯನ್ನು ಕ್ಲೌಡ್ ತಾಯಿ ವ್ಯಕ್ತಪಡಿಸಿದ್ದಾರೆ.
ಹಲವಾರು ಎಮ್ಮಿ ಪ್ರಶಸ್ತಿ ವಿಜೇತ ಧಾರಾವಾಹಿ “ಯುಫೋರಿಯಾ”ದಲ್ಲಿ ಕ್ಲೌಡ್ ಅವರು ಡ್ರಗ್ ಡೀಲರ್ ಫೆಝ್ಕೊ “ಫೆಝ್” ಒʼನೀಲ್ ಪಾತ್ರ ನಿರ್ವಹಿಸಿದ್ದರು.
ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಐಯರ್ಲ್ಯಾಂಡ್ನಿಂದ ತಮ್ಮ ನಿವಾಸವಿರುವ ಓಕ್ಲಂಡ್ಗೆ ಆಗಮಿಸಿದ ಬೆನ್ನಲ್ಲೇ ಕ್ಲೌಡ್ ಸಾವನ್ನಪ್ಪಿದ್ದಾರೆ.





