ತಮಿಳು ಹಾಸ್ಯ ನಟ ರೋಬೋ ಶಂಕರ್ ನಿಧನ

ರೋಬೋ ಶಂಕರ್ (Photo: X)
ಚೆನ್ನೈ: ತಮಿಳು ಹಾಸ್ಯ ನಟ ರೋಬೋ ಶಂಕರ್ ಗುರುವಾರ ರಾತ್ರಿ 9.05ರ ವೇಳೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ರೋಬೊ ಶಂಕರ್ ಅವರ ವಲಸರವಕ್ಕಂನಲ್ಲಿನ ನಿವಾಸಕ್ಕೆ ಭೇಟಿ ನೀಡಿದ ನಟ ಧನುಶ್ ಹಾಗೂ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, ಅವರಿಗೆ ಅಂತಿಮ ನಮನ ಸಲ್ಲಿಸಿದರು. ಇವರೊಂದಿಗೆ ಕಾರ್ತಿ, ವಿಜಯ್ ಸೇತುಪತಿ, ರಾಘವ ಲಾರೆನ್ಸ್ ಹಾಗೂ ಇನ್ನಿತರ ಜನಪ್ರಿಯ ನಟರು ರೋಬೊ ಶಂಕರ್ ಅವರ ಅಂತಿಮ ದರ್ಶನ ಪಡೆದರು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉದಯನಿಧಿ ಸ್ಟಾಲಿನ್, “ರೋಬೋ ಶಂಕರ್ ಅವರ ನಿವಾಸದಲ್ಲಿರಿಸಲಾಗಿದ್ದ ಅವರ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಾವು ಅಂತಿಮ ಗೌರವ ಸಲ್ಲಿಸಿದೆವು. ರಂಗ ಕಲಾವಿದನಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ರೋಬೋ ಶಂಕರ್, ಕಿರುತೆರೆಯ ಮೇಲೆ ಯಶಸ್ಸು ಸಂಪಾದಿಸಿದರು. ಚಲನಚಿತ್ರಗಳಲ್ಲಿ ತಮ್ಮ ನೈಜ ಹಾಸ್ಯದ ಮೂಲಕ ತಮಿಳು ಪ್ರೇಕ್ಷಕರನ್ನು ರಂಜಿಸಿದ ಸಹೋದರ ಶಂಕರ್ ನಿಜವಾಗಿಯೂ ಅದ್ಭುತ ವ್ಯಕ್ತಿ” ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಟ ವಿಜಯ್ ಸೇತುಪತಿ, ನಟ-ನಿರ್ದೇಶಕ ರಾಘವ್ ಲಾರೆನ್ಸ್, ನಟ ಕಾರ್ತಿ, ನಟ-ನಿರ್ಮಾಪಕ ವಿಷ್ಣು ವಿಶಾಲ್, ನಟಿ ಸಿಮ್ರಾನ್, ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಮತ್ತಿತರ ಜನಪ್ರಿಯ ಸಿನಿಮಾ ತಾರೆಯರೂ ರೋಬೋ ಶಂಕರ್ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ರೋಬೋ ಶಂಕರ್ ತಮ್ಮ ಪತ್ನಿ ಪ್ರಿಯಾಂಕಾ, ಪುತ್ರಿ ಇಂದ್ರಜಾ ಹಾಗೂ ಕುಟುಂಬದ ಸದಸ್ಯರನ್ನು ಅಗಲಿದ್ದಾರೆ.





