ಬೀರಬಲ್ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಸತೀಂದರ್ ಕುಮಾರ್ ಖೋಸ್ಲಾ ನಿಧನ

ಸತಿಂದರ್ ಕುಮಾರ್ ಖೋಸ್ಲಾ (Photo: Twitter)
ಹೊಸದಿಲ್ಲಿ: ಹಿರಿಯ ನಟ, ಬೀರಬಲ್ ಎಂದೇ ಜನಪ್ರಿಯರಾಗಿದ್ದ ಸತಿಂದರ್ ಕುಮಾರ್ ಖೋಸ್ಲಾ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಹಿಂದಿ ಸಿನೆಮಾ ಮಾತ್ರವಲ್ಲದೆ ಪಂಜಾಬಿ, ಭೋಜಪುರಿ ಮತ್ತು ಮರಾಠಿ ಸೇರಿ ಒಟ್ಟು 500ಕ್ಕೂ ಅಧಿಕ ಸಿನೆಮಾಗಳಲ್ಲಿ ಅವರು ನಟಿಸಿದ್ದರು. ಸತೀಂದರ್ ಅವರು ತಮ್ಮ ಹಾಸ್ಯ ಪಾತ್ರಗಳಿಂದ ಹೆಚ್ಚು ಜನಪ್ರಿಯರಾಗಿದ್ದರು.
ಅವರ ಮೊದಲ ಚಿತ್ರ ವಿ ಶಾಂತಾರಾಮ್ ಅವರ ‘ಬೂಂದ್ ಜೋ ಬನ್ ಗಯೀ ಮೋತಿ’ ಆಗಿತ್ತು. ಅದರಲ್ಲಿ ಅವರು ಬಾಂಚರಮ್ ಪಾತ್ರ ನಿರ್ವಹಿಸಿದ್ದರು. ನಂತರ ಅವರು 1975ರಲ್ಲಿ ರಮೇಶ್ ಸಿಪ್ಪಿ ಅವರ ಶೋಲೆ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಅದು ಅವರಿಗೆ ಜನಪ್ರಿಯತೆ ನೀಡಿತ್ತು. ಅನುರೋಧ್ ಮತ್ತು ಅಮೀರ್ ಗರೀಬ್ ಚಿತ್ರಗಳಲ್ಲೂ ಅವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮನೋಜ್ ಕುಮಾರ್ ಅವರ ಉಪಕಾರ್, ರೋಟಿ ಕಪ್ಡಾ ಔರ್ ಮಕಾನ್ ಹಾಗೂ ಕ್ರಾಂತಿ ಚಿತ್ರದಲ್ಲೂ ಅವರು ಅಭಿನಯಿಸಿದ್ದರಲ್ಲದೆ ನಸೀಬ್, ಯಾರಾನಾ, ಹಮ್ ಹೈ ರಾಹಿ ಪ್ಯಾರ್ ಕೇ, ಅಂಜಾಮ್, ಸದ್ಮಾ, ಬೇತಾಬ್, ದಿಲ್, ಬೋಲ್ ರಾಧಾ ಬೋಲ್, ಮಿಸ್ಟರ್ ಎಂಡ್ ಮಿಸೆಸ್ ಖಿಲಾಡಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.