‘ಕಂಗುವಾ’ ಚಿತ್ರೀಕರಣ ವೇಳೆ ಗಾಯಗೊಂಡ ನಟ ಸೂರ್ಯ

ನಟ ಸೂರ್ಯ (Photo: Instagram)
ಚೆನ್ನೈ: ‘ಕಂಗುವಾ’ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ಸೂರ್ಯ ಅವರ ತೋಳಿನ ಮೇಲೆ ಕ್ಯಾಮೆರಾ ಬಿದ್ದಿದ್ದರಿಂದ ಅವರು ಗಾಯಗೊಂಡಿರುವ ಘಟನೆ ನಡೆದಿದೆ. ಈ ಘಟನೆಯ ಬೆನ್ನಿಗೇ ಚೆನ್ನೈನಲ್ಲಿ ನಡೆಯುತ್ತಿರುವ ಈ ಚಿತ್ರದ ಚಿತ್ರೀಕರಣವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ANI ಸುದ್ದಿ ಸಂಸ್ಥೆಯ ಪ್ರಕಾರ, ಈ ಘಟನೆಯು ಮಧ್ಯರಾತ್ರಿ 1.30ರ ಸಮಯದಲ್ಲಿ ಇವಿಪಿ ಫಿಲ್ಮ್ ಸಿಟಿಯಲ್ಲಿ ಜರುಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೆ ಹಲವಾರು ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಟ ಸೂರ್ಯ, “ಶೀಘ್ರ ಗುಣಮುಖರಾಗಿ ಎಂದು ಸಂದೇಶಗಳ ಮಹಾಪೂರ ಹರಿಸಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನಾನೀಗ ಚೇತರಿಸಿಕೊಂಡಿದ್ದು, ನಿಮ್ಮ ಪ್ರೀತಿಗೆ ಸದಾ ಆಭಾರಿಯಾಗಿರುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.
ʼಕಂಗುವಾ’ ಚಿತ್ರದಲ್ಲಿ ದಿಶಾ ಪಟಾನಿ ಕೂಡಾ ಅಭಿನಯಿಸುತ್ತಿದ್ದಾರೆ. ಈ ಚಿತ್ರವು ವಿಶ್ವಾದ್ಯಂತ 3ಡಿ ಹಾಗೂ ಐಮ್ಯಾಕ್ಸ್ ಮಾದರಿಯಲ್ಲಿ 38 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
‘ಕಂಗುವಾ’ ಚಿತ್ರವನ್ನು ಸಿರುದೈ ಖ್ಯಾತಿಯ ಶಿವ ನಿರ್ದೇಶಿಸಿದ್ದು, ವೆಟ್ರಿ ಪಳನಿಸ್ವಾಮಿ ಛಾಯಾಗ್ರಹಣ ಹಾಗೂ ಇತ್ತೀಚೆಗೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ: ದಿ ರೈಸ್’ ಚಿತ್ರದ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ದೇವಿಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಿದೆ.







