ಖ್ಯಾತ ಹಾಲಿವುಡ್ ನಟ ಟೈಲರ್ ಕ್ರಿಸ್ಟೋಫರ್ ನಿಧನ

ಟೈಲರ್ ಕ್ರಿಸ್ಟೋಫರ್ (Photo: Instagram)
ಹಾಲಿವುಡ್: ಖ್ಯಾತ ಹಾಲಿವುಡ್ ನಟ ಟೈಲರ್ ಕ್ರಿಸ್ಟೋಫರ್ ಹೃದಯಸ್ತಂಭನಕ್ಕೀಡಾಗಿ ಮೃತಪಟ್ಟಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು.
ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಮತ್ತೊಬ್ಬ ಹಾಲಿವುಡ್ ನಟ ಮಾರಿಸ್ ಬೆನಾರ್ಡ್, “ಸ್ಯಾನ್ ಡಿಯಾಗೊ ಅಪಾರ್ಟ್ ಮೆಂಟ್ ನಲ್ಲಿ ಟೈಲರ್ ಕ್ರಿಸ್ಟೋಫರ್ ನಿಧನರಾಗಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ. ‘ಜನರಲ್ ಹಾಸ್ಪಿಟಲ್’ ಚಿತ್ರದಲ್ಲಿ ಮಾರಿಸ್ ಬೆನಾರ್ಡ್ ಅವರು ಟೈಲರ್ ಕ್ರಿಸ್ಟೋಫರ್ ಅವರೊಂದಿಗೆ ಸಹನಟನ ಪಾತ್ರ ನಿರ್ವಹಿಸಿದ್ದರು.
“ಟೈಲರ್ ಕ್ರಿಸ್ಟೋಫರ್ ನಿಧನರಾಗಿರುವ ಸುದ್ದಿಯನ್ನು ನಾವು ಬಹಳ ದುಃಖದಿಂದ ಹಂಚಿಕೊಳ್ಳುತ್ತಿದ್ದೇವೆ. ಅವರು ಮಂಗಳವಾರ (ಅಕ್ಟೋಬರ್ 31) ಬೆಳಗ್ಗೆ ತಮ್ಮ ಸ್ಯಾನ್ ಡಿಯಾಗೊ ಅಪಾರ್ಟ್ ಮೆಂಟ್ ನಲ್ಲಿ ಹೃದಯಸ್ತಂಭನಕ್ಕೀಡಾಗಿ ಮೃತಪಟ್ಟಿದ್ದಾರೆ. ಟೈಲರ್ ಓರ್ವ ಪ್ರತಿಭಾವಂತ ನಟರಾಗಿದ್ದು, ತಾವು ನಟಿಸಿದ ಪ್ರತಿಯೊಂದು ಚಿತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದರು. ತಮ್ಮ ನಟನೆಯಿಂದ ತಮ್ಮ ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡುತ್ತಿದ್ದರು. ಇತ್ತೀಚೆಗೆ ಅವರು ತಮ್ಮ ಬೈಪೋಲಾರ್ ಖಿನ್ನತೆ ಹಾಗೂ ಮದ್ಯ ಚಟದಿಂದ ಅನುಭವಿಸುತ್ತಿರುವ ಕಷ್ಟವನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಅವರು ಉತ್ತಮ ಮಾನಸಿಕ ಆರೋಗ್ಯ ಚಿಕಿತ್ಸೆ ಪಡೆಯಬೇಕಿತ್ತು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ” ಎಂದು ನಟ ಮಾರಿಸ್ ಬೆನಾರ್ಡ್ ಭಾವಪೂರ್ಣ ವಿದಾಯದ ಪೋಸ್ಟ್ ಮಾಡಿದ್ದಾರೆ.
‘ಜನರಲ್ ಹಾಸ್ಪಿಟಲ್’ ಚಿತ್ರದ ಮೂಲಕ ಖ್ಯಾತರಾಗಿದ್ದ ಟೈಲರ್ ಕ್ರಿಸ್ಟೋಫರ್, 1996ರಿಂದ 2016ರವರೆಗೆ ಕಿರುತೆರೆಯಲ್ಲಿ ಪ್ರಸಾರವಾಗಿದ್ದ ‘ನಿಕೋಲಸ್ ಕ್ಯಾಸಡೈನ್’ ಹಾಗೂ 2004ರಿಂದ 2005ರವರೆಗೆ ಪ್ರಸಾರವಾಗಿದ್ದ ‘ಕಾನರ್ ಬಿಷಪ್’ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿದ್ದರು. ‘ಡೇಸ್ ಆಫ್ ಅವರ್ ಲೈವ್ಸ್’ ಚಿತ್ರದಲ್ಲಿ ಅವರು ನಿರ್ವಹಿಸಿದ್ದ ಸ್ಟೀಫನ್ ಡಿಮೆರಾ ಪಾತ್ರವನ್ನು ಹಲವಾರು ಚಿತ್ರ ರಸಿಕರು ಮೆಚ್ಚಿಕೊಂಡಿದ್ದರು.
ಈ ನಡುವೆ, ‘ಜನರಲ್ ಹಾಸ್ಪಿಟಲ್’ ಚಿತ್ರದ ಕಾರ್ಯಕಾರಿ ನಿರ್ಮಾಪಕ ಫ್ರಾಂಕ್ ವ್ಯಾಲೆಂಟಿನಿ, “ಟೈಲರ್ ಕ್ರಿಸ್ಟೋಫರ್ ನಿಧನದ ಸುದ್ದಿ ತಿಳಿದು ನನ್ನ ಹೃದಯ ಒಡೆದಂತಾಗಿದೆ. ಅವರೊಬ್ಬ ಸೌಮ್ಯ, ಅದ್ಭುತ ನಟನಾಗಿದ್ದರು ಹಾಗೂ ನನ್ನ ಆತ್ಮೀಯ ಗೆಳೆಯನಾಗಿದ್ದರು. ಅವರು ನಮ್ಮ ಜನರಲ್ ಹಾಸ್ಪಿಟಲ್ ಕುಟುಂಬ ಹಾಗೂ ನಿಕೊಲಸ್ ಕ್ಯಾಸಡೈನ್ ಅಭಿಮಾನಿಗಳ ಪ್ರೀತಿಯ ವ್ಯಕ್ತಿಯಾಗಿದ್ದರು. ಈ ಕ್ಲಿಷ್ಟಕರ ಸಮಯದಲ್ಲಿ ಜನರಲ್ ಹಾಸ್ಪಿಟಲ್ ತಂಡದ ಪರವಾಗಿ ಅವರ ಪ್ರೀತಿಪಾತ್ರರೆಲ್ಲರಿಗೂ ನಮ್ಮ ಹೃದಯಪೂರ್ವಕ ಸಹಾನುಭೂತಿಗಳು” ಎಂದು ಹೇಳಿದ್ದಾರೆ.







